

ಜಗದೀಶ ಹೊಂಬಳಿ ಬೆಳಗಾವಿ
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ನಿರುದ್ಯೋಗ ಸಮಸ್ಯೆ ನೀಗಿಸುವ ಸರ್ಕಾರಗಳ ಮಾತು ಒಂದು ಕಡೆ ಇರಲಿ. ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ ಸಾವಿರಾರು ಹುದ್ದೆಗಳು ಭರ್ತಿಗೆ ಸರ್ಕಾರಗಳು ಅನಾಸಕ್ತಿ ತೋರಿಸುತ್ತಿವೆ.
ಹೌದು. ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಿ, ಸ್ವಸ್ಥ ಸಮಾಜ ನಿರ್ಮಿಸಬೇಕಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯೇ ಸಿಬ್ಬಂದಿ ಕೊರತೆಯಿಂದ ಸೊರಗಿದೆ. ರಾಜ್ಯದಲ್ಲಿ ಬರೋಬ್ಬರಿ 13,622 ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿ ಇದ್ದು, ಹಲವು ವರ್ಷಗಳಿಂದ ಇದ್ದ ಸಿಬ್ಬಂದಿಯೇ ದಯನೀಯ ಸ್ಥಿತಿಯಲ್ಲಿ ಇಲಾಖೆ ರಥ ಎಳುದುಕೊಂಡು ಹೊರಟಿದ್ದಾರೆ. ಇನ್ನು ವೈದ್ಯಕೀಯೇತರ ಸಿಬ್ಬಂದಿಯ ಸಾವಿರಾರು ಹುದ್ದೆಗಳೂ ಖಾಲಿ ಇವೆ. ಇಲಾಖೆಯ ಆಡಳಿತ ವಿಭಾಗವೂ ಸಿಬ್ಬಂದಿ ಕೊರತೆಯಿಂದ ಬಸವಳಿದಿದೆ.
13,622 ಹುದ್ದೆಗಳು ಖಾಲಿ:
ರಾಜ್ಯಾದ್ಯಂತ 3,636 ಪ್ರಾಥಮಿಕ ಆರೋಗ್ಯ ಸಂರಕ್ಷಣಾ ಅಧಿಕಾರಿ, 2,849 ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳು ಖಾಲಿ ಇವೆ. 914 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆ, 572 ತಜ್ಞ ವೈದ್ಯರ ಹುದ್ದೆ, 2,272 ಶೂಶ್ರುಶಕ ಅಧಿಕಾರಿ, 1,239 ಔಷಧಿ ತಜ್ಞ ಅಧಿಕಾರಿ, 1,405 ಕಿರಿಯ ಪ್ರಯೋಗಾಲಯ ತಂತ್ರಜ್ಞ ಅಧಿಕಾರಿ, 318 ಹಿರಿಯ ಪ್ರಯೋಗಾಲಯ ತಂತ್ರಜ್ಞ ಅಧಿಕಾರಿ, 152 ಕ್ಷ-ಕಿರಣ ತಂತ್ರಜ್ಞ ಅಧಿಕಾರಿ, 245 ನೇತ್ರ ತಂತ್ರಜ್ಞ ಅಧಿಕಾರಿ, ಹಲ್ಲಿನ ತಜ್ಞ ವೈದ್ಯ 20 ಹುದ್ದೆ ಸೇರಿ 13,622 ಖಾಲಿ ಹುದ್ದೆಗಳು ಭರ್ತಿಯಾಗದೇ ಹಾಗೆ ಉಳಿದಿವೆ. ಇದರಿಂದಾಗಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಕಾಲಕ್ಕೆ ಆರೋಗ್ಯ ಸೇವೆ ಸಿಗದೇ ಸಾಮಾನ್ಯ ಜನರು ಪರಿತಪಿಸುವಂತಾಗಿದೆ. ಅಲ್ಲದೇ ಆಡಳಿತ ವಿಭಾಗದಲ್ಲೂ ಎಸ್‌ಡಿಎ, ಎಫ್‌ಡಿಎ, ಟೈಪಿಸ್ಟ್, ಡ್ರೈವರ್ ಸೇರಿ ‘ಡಿ’ ದರ್ಜೆಯ ಸಾವಿರಾರು ಹುದ್ದೆಗಳು ಭರ್ತಿಯಾಗದೇ ಹಾಗೇ ಉಳಿದಿವೆ. ಆಡಳಿತ ವಿಭಾಗವು ಸಿಬ್ಬಂದಿ ಕೊರತೆಯಿಂದ ನಲುಗಿದೆ. ಹಲವು ವರ್ಷಗಳಿಂದ ಈ ಹುದ್ದೆಗಳು ಭರ್ತಿಯಾಗದೇ ಹಾಗೇ ಉಳಿದಿದ್ದರಿಂದ ಇಲಾಖೆ ಮೇಲೆ ಕೆಟ್ಟ ಪರಿಣಾಮ ಬೀರಿದೆ.
ಹಲವು ಸೇವೆಗಳಿಗೆ ಹಿನ್ನಡೆ:
ಪ್ರಮುಖವಾಗಿ ಪ್ರಾಥಮಿಕ ಆರೋಗ್ಯ ಸಂರಕ್ಷಣಾ ಅಧಿಕಾರಿ, ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳ ಕೊರತೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲಿ ತೆರಳಿ ಡೆಂೆ, ಮಲೇರಿಯಾ, ಜ್ವರ ತಪಾಸಣೆ, ರಕ್ಷ ಪರೀಕ್ಷೆ, ರೋಗಗಳನ್ನು ಗುರುತಿಸುವ ಸಮೀಕ್ಷೆ ಕಾರ್ಯಕ್ಕೆ ಹಿನ್ನೆಡೆಯಾಗಿದೆ. ರಾಜ್ಯದಲ್ಲಿ 2,600ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಪ್ರತಿ ಕೇಂದ್ರ ವ್ಯಾಪ್ತಿಯಲ್ಲಿ 3-5 ಅಧಿಕಾರಿಗಳು ಬೇಕು. ಈ ಹುದ್ದೆಗಳು ಖಾಲಿ ಇರುವುದರಿಂದ ಸಮಸ್ಯೆ ಎದುರಾಗಿದೆ. ಸಿಬ್ಬಂದಿ ಕೊರತೆಯಿಂದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಸರಿಯಾಗಿ ನಡೆಯುತ್ತಿಲ್ಲ. ಗ್ರಾಮಸ್ಚಚ್ಛತೆ, ನೀರು ಪರೀಕ್ಷೆ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳಿಗೂ ಹೊಡೆತ ಬಿದ್ದಿದೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಹೃದಯರೋಗ ತಜ್ಞರು, ನರರೋಗ ತಜ್ಞರ ಕೊರತೆಯಿಂದ ಬಡ ರೋಗಿಗಳು ಪರದಾಡುವಂತಾಗಿದೆ.
ಬೆಳಗಾವಿಯಲ್ಲಿ 1,723 ಹುದ್ದೆ ಖಾಲಿ:
ಬೆಳಗಾವಿ ಜಿಲ್ಲೆಯೊಂದರಲ್ಲೇ ವೈದ್ಯಕೀಯ ಹಾಗೂ ವೈದ್ಯಕೀಯೇತರ 1,723 ಸಿಬ್ಬಂದಿ ಹೆದ್ದಗಳು ಖಾಲಿ ಇವೆ. ಗ್ರುಪ್ ‘ಎ’ 106, ಗ್ರುಪ್ ‘ಬಿ’ 10 ಹುದ್ದೆ, ಗ್ರುಪ್ ‘ಸಿ’ 980, ಗ್ರುಪ್ ‘ಡಿ’ 627 ಸೇರಿ 1,723 ಹುದ್ದೆಗಳು ಭರ್ತಿಯಾಗದೇ ಹಾಗೇ ಉಳಿದಿವೆ. ನಿವೃತ್ತಿಯಾದ ಬಳಿಕ ಹುದ್ದೆಗಳ ಭರ್ತಿಯೇ ಆಗಿಲ್ಲ.
ಆಯುಕ್ತರ ಪ್ರತಿಕ್ರಿಯೆ:
ಬಿಜೆಪಿ ಸರ್ಕಾರ ಅವಧಿಯಲ್ಲಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಾರಣಾಂತರಗಳಿಂದ ನೇಮಕಾತಿ ಆಗಲಿಲ್ಲ. ಈಗ ಹೊಸ ಸರ್ಕಾರಕ್ಕೂ ಖಾಲಿ ಹುದ್ದೆಗಳ ನೇಮಕ ಕುರಿತಂತೆ ಮತ್ತೊಮ್ಮೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಮುತುವರ್ಜಿ ವಹಿಸುತ್ತಿದೆ.
* ಡಿ. ರಂದೀಪ್, ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಬೆಂಗಳೂರು