135 ಗ್ರಾಮಗಳಲ್ಲಿ ಕೋವಿಡ್ ಟೆಸ್ಟ್ - ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

1414
Published on


ಹುಕ್ಕೇರಿ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕಿನ ತ್ವರಿತ ಪತ್ತೆಗಾಗಿ ಆಯಾ ಗ್ರಾಮಗಳಲ್ಲಿ ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದ್ದಾರೆ.

ತಾಲೂಕಿನ ಹುಲ್ಲೋಳ್ಳಿ ಹಾಗೂ ಹತ್ತರಗಿ ಗ್ರಾಮದಲ್ಲಿ ಸೋಮವಾರ ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ತ್ವರಿತ ಪತ್ತೆಗಾಗಿ ಎಲ್ಲ ಗ್ರಾಮಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಸೋಮವಾರ ಜಿಲ್ಲೆಯ 135 ಗ್ರಾಮಗಳಲ್ಲಿ ಏಕಕಾಲಕ್ಕೆ ಪರೀಕ್ಷೆ ಮಾಡಲಾಗಿದೆ. ಉಳಿದ ಗ್ರಾಮಗಳಲ್ಲೂ ರ‌್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗುವುದು.

ಅದಕ್ಕಾಗಿ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಓರ್ವ ನೋಡಲ್ ಅಧಿಕಾರಿ ನೇಮಿಸಲಾಗಿದ್ದು, ಗ್ರಾಮ ಪಂಚಾಯಿತಿ ಟಾಸ್ಕ್ ಫೋರ್ಸ್ ಮೂಲಕ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಕರೊನಾ ಪರೀಕ್ಷೆ ಮತ್ತು ವರದಿ ವಿಳಂಬವಾಗುತ್ತಿರುವುದರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆ ಆರಂಭಿಸಲಾಗಿದೆ. ಸೋಂಕಿನ ಲಕ್ಷಣ ಹೊಂದಿರುವವರು ಮತ್ತು ಸೋಂಕಿತರ ಸಂಪರ್ಕಿತರನ್ನು ಆಯಾ ಗ್ರಾಮಗಳಲ್ಲಿಯೇ ಪರೀಕ್ಷಿಸಲಾಗುವುದು. ಸೋಂಕು ದೃಢಪಟ್ಟರೆ ಅಂತಹವರನ್ನು ತಕ್ಷಣವೇ ಸ್ಥಳೀಯ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಗತ್ಯ ಔಷಧೋಪಚಾರ: ಆರೋಗ್ಯ ಇಲಾಖೆಯ ತಂಡ ಗ್ರಾಮದಲ್ಲಿ ಕೋವಿಡ್ ಪರೀಕ್ಷಾ ಶಿಬಿರ ಏರ್ಪಡಿಸಿದಾಗ ಶೀತ, ಜ್ವರದ ಲಕ್ಷಣಗಳಿರುವ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕಿತರ ಚಿಕಿತ್ಸೆಗೆ ಸ್ಥಳೀಯವಾಗಿ, ತಾಲೂಕು ಮಟ್ಟದಲ್ಲಿ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಸೋಂಕಿತರಿಗೆ ಉಚಿತವಾಗಿ ಊಟೋಪಚಾರದ ಜತೆಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಔಷಧೋಪಚಾರ ನೀಡಲಾಗುತ್ತಿದೆ ಎಂದರು.

ಇಬ್ಬರಲ್ಲಿ ಸೋಂಕು ಪತ್ತೆ: ಹುಕ್ಕೇರಿ ತಾಲೂಕಿನ ಹುಲ್ಲೋಳಿಯಲ್ಲಿ 39 ಜನರಿಗೆ ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದಾಗ ಅದರಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಯಿತು. ಇಬ್ಬರನ್ನೂ ತಕ್ಷಣವೇ ಕೋವಿಡ್ ಕೇರ್ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು. ಉಳಿದ 37 ಜನರ ವರದಿ ನೆಗೆಟಿವ್ ಬಂದಿದ್ದರೂ ಒಂದು ವೇಳೆ ಲಕ್ಷಣ ಕಂಡುಬಂದರೆ ಅಂತಹವರ ಮಾದರಿಯನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಗ್ರಾಮದಲ್ಲಿ ಸಂಚರಿಸಿ ಕೋವಿಡ್ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದ ಜಿಲ್ಲಾಧಿಕಾರಿ ಹಿರೇಮಠ ಅವರು ನಂತರ ಕರೊನಾ ನಿಯಂತ್ರಣ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಜತೆ ಚರ್ಚೆ ನಡೆಸಿದರು. ಸೋಂಕಿತರ ಮನವೊಲಿಸುವ ಮೂಲಕ ಕೂಡಲೇ ಅವರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಿ ಎಂದು ಸಲಹೆ ನೀಡಿದರು.

ಜನತಾ ಕಾಲನಿಯಲ್ಲಿ ಐಸೋಲೇಷನ್‌ನಲ್ಲಿರುವ ಕೆಲ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ಗ್ರಾಮದ ಮನೆ-ಮನೆಗೆ ತೆರಳಿ, ಅನಗತ್ಯವಾಗಿ ಯಾರೂ ಹೊರಗಡೆ ಸಂಚರಿಸಬಾರದು. ಮಾಸ್ಕ್ ಧರಿಸಬೇಕು, ಆಗಾಗ ಸಾಬೂನು, ಸ್ಯಾನಿಟೈಸರ್ ಮೂಲಕ ಕೈ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಗಡಿ ಚೆಕ್ ಪೋಸ್ಟ್ ಪರಿಶೀಲನೆ: ಬಳಿಕ ಹಿರೇಮಠ ಅವರು ಉಳ್ಳಾಗಡ್ಡಿ-ಖಾನಾಪುರದಲ್ಲಿ ಸ್ಥಾಪಿಸಲಾಗಿರುವ ಗಡಿ ಚೆಕ್‌ಪೋಸ್ಟ್, ಹತ್ತರಗಿ ಗ್ರಾಮಕ್ಕೂ ಭೇಟಿ ನೀಡಿ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಹತ್ತರಗಿ ಗ್ರಾಮದಲ್ಲಿ ಸೋಂಕಿತರ ಸಂಪರ್ಕಿತರು ಹಾಗೂ ಸೋಂಕಿನ ಲಕ್ಷಣ ಹೊಂದಿರುವವರಿಗೆ ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಎಚ್.ವಿ.ದರ್ಶನ್ ನೇತೃತ್ವದಲ್ಲಿ ಬೈಲಹೊಂಗಲ ತಾಲೂಕಿನ ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆಗೆ ಚಾಲನೆ ನೀಡಲಾಯಿತು. ಅದೇ ರೀತಿ ಅಪರ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೋವಿಡ್ ಪತ್ತೆಗೆ ಪರೀಕ್ಷೆ ನಡೆಸಲಾಯಿತು. ಗ್ರಾಮ ಮಟ್ಟದಲ್ಲಿ ಇರುವ ಟಾಸ್ಕ್‌ಫೋರ್ಸ್ ಮೂಲಕ ಕೋವಿಡ್ ಪರೀಕ್ಷಾ ಶಿಬಿರ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net