ಕಾವೇರಿ ಹೋರಾಟಗಾರರಿಗಿಲ್ಲ ಸಂಕ್ರಾಂತಿ: ಚುರುಮುರಿ ತಿಂದು ಪ್ರತಿಭಟನೆ

133rd day Cauvery protest mandya
Published on

ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಮತ್ತೆ ಮತ್ತೆ ಆದೇಶ ಮಾಡುತ್ತಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರ ಮತ್ತು ರಾಜ್ಯಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಸಂಕ್ರಾಂತಿ ಹಬ್ಬದ ದಿನವೂ ಮುಂದುವರೆಯಿತು.

ಸರ್‌ಎಂವಿ ಪ್ರತಿಮೆ ಎದುರು ನಡೆದ 133ನೇ ದಿನದ ಹೋರಾಟದಲ್ಲಿ ಚುರುಮುರಿ ತಯಾರಿಸಿ ತಿನ್ನುವ ಮೂಲಕ ಆಕ್ರೋಶ ಹೊರಹಾಕಿದರು. ಜತೆಗೆ ರೈತರ ಪಾಲಿಗೆ ಎಳ್ಳು-ಬೆಲ್ಲದ ಸವಿ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು. ನಿವೃತ್ತ ಇಂಜಿನಿಯರ್ ಮೊತ್ತಹಳ್ಳಿ ಕೆಂಪೇಗೌಡ ಮಾತನಾಡಿ, ಕಾವೇರಿ ನದಿ ನೀರು ತಮಿಳುನಾಡಿಗೆ ನಿರಂತರವಾಗಿ ಹರಿದು ಹೋಗಿದೆ. ಪ್ರಾಧಿಕಾರ ಹಾಗೂ ನಿಯಂತ್ರಣ ಸಮಿತಿ ಎದುರು ಸಮರ್ಥವಾದ ಮಂಡನೆ ಮಾಡುವಲ್ಲಿ ರಾಜ್ಯಸರ್ಕಾರ ವಿಫಲವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಶೇ. 90ರಷ್ಟು ರಾಜಕಾರಣ ಮಾಡಲಿ, ಕನಿಷ್ಟ ಹತ್ತರಷ್ಟು ಭಾಗ ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ರೈತರ ಕಾಪಾಡಲು ಮುಂದಾಗಲಿ ಎಂದು ಹೇಳಿದರು.

ಮೇಕೆದಾಟು ಯೋಜನೆಗೆ ಪಾದಯಾತ್ರೆ ಮಾಡಿದ ನೀರಾವರಿ ಸಚಿವ ಡಿ.ಕೆ ಶಿವಕುಮಾರ್ ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟ 133 ದಿನ ಪೂರೈಸಿದರೂ ಇತ್ತ ಸುಳಿದಿಲ್ಲ. ಹೋರಾಟಗಾರರ ಜತೆ ಮಾತುಕತೆ ಮಾಡಿಲ್ಲ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿತಗೊಳ್ಳುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಬಿಡಲಾಗಿದೆ. ಅದು ಕೊನೆಯ ಭಾಗ ಮದ್ದೂರು- ಮಳವಳ್ಳಿ ಪ್ರದೇಶಕ್ಕೆ ತಲುಪಿಲ್ಲ. ಆದರೂ ಸಹ ನಾಲೆಗೆ ನೀರು ನಿಲ್ಲಿಸಲು ಮುಂದಾಗಿದೆ. ಇನ್ನು ಮೂರು ನಾಲ್ಕು ದಿನ ನಾಲೆಗಳಿಗೆ ನೀರು ಹರಿಸಬೇಕಾಗಿದೆ ಎಂದು ಹೇಳಿದರು.

ಧರಣಿಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಜೈ ಕರ್ನಾಟಕ ಪರಿಷತ್‌ನ ಎಸ್.ನಾರಾಯಣ್, ಮಲ್ಲೇಶ್, ಫಯಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net