

ಬೀದರ್: ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರ 72ನೇ ಜನ್ಮದಿನವನ್ನು ಇಲ್ಲಿಯ ವಿದ್ಯಾನಗರ ಕಾಲೊನಿಯ ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯವು ರಕ್ತದಾನ ಶಿಬಿರ ಹಾಗೂ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಗುರುವಾರ ಅರ್ಥಪೂರ್ಣವಾಗಿ ಆಚರಿಸಿತು. ಬ್ರಿಮ್ಸ್ ರಕ್ತನಿಧಿ ಕೇಂದ್ರದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಮಹಿಳೆಯರು, ಪುರುಷರು ಹಾಗೂ ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ಸಸಿಗೆ ನೀರೆರೆದು ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ಮಾತನಾಡಿ, ಈ ಭಾಗದ ಧಾರ್ಮಿಕ, ಸಾಮಾಜಿಕ, ಸಾಹಿತ್ತಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಡಾ. ಬಸವಲಿಂಗ ಪಟ್ಟದ್ದೇವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಪಟ್ಟದ್ದೇವರು ವಚನ ಸಾಹಿತ್ಯ, ಶರಣ ಸಂಸ್ಕøತಿ ಹಾಗೂ ಬಸವ ಪರಂಪರೆಯನ್ನು ನಾಡಿನ ಉದ್ದಗಲಕ್ಕೂ ಪಸರಿಸುತ್ತಿದ್ದಾರೆ. ಮಠದ ಶಾಲಾ ಕಾಲೇಜುಗಳಲ್ಲಿ ಸಂಸ್ಕಾರಯುತ ಪ್ರಜೆಗಳನ್ನು ರೂಪಿಸುತ್ತಿದ್ದಾರೆ. ಉಚಿತ ಅನ್ನ, ಅಕ್ಷರ, ಆಶ್ರಯದೊಂದಿಗೆ ರಸ್ತೆ ಬದಿಯಲ್ಲಿ ಬಿಟ್ಟು ಹೋದ, ತಿಪ್ಪೆ ಗುಂಡಿಗೆ ಎಸೆದ ಅನಾಥ, ನಿರ್ಗತಿಕ ಮಕ್ಕಳ ಬಾಳು ಬೆಳಗಲು ಅವಿರತ ಶ್ರಮಿಸುತ್ತಿದ್ದಾರೆ ಎಂದು ಬಣ್ಣಿಸಿದರು.
ಉದ್ಯಮಿ ಜೈರಾಜ ಖಂಡ್ರೆ ಮಾತನಾಡಿ, ಡಾ. ಬಸವಲಿಂಗ ಪಟ್ಟದ್ದೇವರು ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಬಡವರು, ಅಸಹಾಯಕರ ಆಶ್ರಯದಾತರಾಗಿದ್ದಾರೆ ಎಂದು ನುಡಿದರು.
ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ, ಡಾ. ಬಸವಲಿಂಗ ಪಟ್ಟದ್ದೇವರು ಧಾರ್ಮಿಕ, ಸಾಮಾಜಿಕ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ತಮ್ಮ ಜನ್ಮದಿನವನ್ನು ಸುದೈವಿ ಮಕ್ಕಳ ಜನ್ಮದಿನವನ್ನಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷದಿಂದ ಸರ್ಕಾರವೇ ಸುದೈವ ಮಕ್ಕಳ ಜನ್ಮದಿನ ಆಚರಿಸಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದ ಕಾರ್ಯದರ್ಶಿ ಡಾ. ಎಸ್.ಬಿ. ಬಿರಾದಾರ ಮಾತನಾಡಿ, ಪಟ್ಟದ್ದೇವರು ಪ್ರವಚನಗಳಿಗಷ್ಟೇ ಸೀಮಿತರಾಗಿಲ್ಲ. ಅನಾಥರು, ದೀನ ದಲಿತರು, ನಿರ್ಗತಿಕರ ಭವಿಷ್ಯ ರೂಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಪಾಲಕರು ಇರುವ ಮಕ್ಕಳ ಜನ್ಮದಿನವನ್ನು ಪಾಲಕರೇ ಆಚರಿಸುತ್ತಾರೆ. ಪಾಲಕರಿಲ್ಲದ ಮಕ್ಕಳು ಮರುಗಬಾರದು ಎನ್ನುವ ಕಾರಣ ಶ್ರೀಗಳು ತಮ್ಮ ಜನ್ಮದಿನವನ್ನು ಸುದೈವಿ ಮಕ್ಕಳ ಜನ್ಮದಿನವನ್ನಾಗಿ ಆಚರಿಸುವ ಮೂಲಕ ಔದರ್ಯ ಮೆರೆದಿದ್ದಾರೆ ಎಂದು ತಿಳಿಸಿದರು.
ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ರಕ್ತನಿಧಿ ಕೇಂದ್ರ ಸತೀಶ್ ಚಾಂಗುನೆ, ಉಪನ್ಯಾಸಕ ಪ್ರಕಾಶ, ಸುವರ್ಣಾ ಚಿಮಕೋಡೆ, ಮಲ್ಲಿಕಾರ್ಜುನ ಹುಡುಗೆ, ಶರಣಪ್ಪ ಚಿಮಕೋಡೆ, ಗುರುನಾಥ ಬಿರಾದಾರ, ಸಂಗ್ರಾಮಪ್ಪ ಬಿರಾದಾರ, ಸಂಗ್ರಾಮ ಎಂಗಳೆ, ವಿ.ಎಂ. ಡಾಕುಳಗಿ, ಮೀನಾಕ್ಷಿ ಅಶೋಕ ಪಾಟೀಲ, ಜಗದೇವಿ ಕಾಬಾ, ಮಾಲಾಶ್ರೀ ಹಜ್ಜರಗಿ, ಶಿವಶರಣಪ್ಪ ಕಾರಾಮುಂಗೆ, ರೇಣುಕಾ, ವಿಜಯಲಕ್ಷ್ಮಿ ಹುಗ್ಗೆಳ್ಳಿ, ಸಿದ್ದು ಕೋರೆ, ಮಂಜುನಾಥ ಲಾಧಾ, ಗುರುನಾಥ, ಸಿದ್ದು ಬಿರಾದಾರ, ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ, ಮಹಾದೇವಿ ಬಿರಾದಾರ, ಡಾ. ವೈಜಿನಾಥ ಬಿರಾದಾರ, ಅಕ್ಕ ಮಹಾದೇವಿ ಬಳಗದ ಪದಾಧಿಕಾರಿಗಳು, ಪ್ರಸಾದ ನಿಲಯದ ವಿದ್ಯಾರ್ಥಿಗಳು, ರಕ್ತನಿಧಿ ಕೇಂದ್ರ ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.
ಪ್ರೊ. ಉಮಾಕಾಂತ ಮೀಸೆ ಸ್ವಾಗತಿಸಿದರು. ಶ್ರಾವಣ ಮಾಸ ಪ್ರವಚನ ಸ್ವಾಗತ ಸಮಿತಿಯ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಲಕ್ಷ್ಮಿ ಬಿರಾದಾರ ವಂದಿಸಿದರು.