

ತುಮಕೂರು: ಜಿಲ್ಲೆಯಲ್ಲಿ ಸತತ 3ನೇ ದಿನವೂ ಕರೊನಾ ಶತಕ ಬಾರಿಸಿದೆ. ಸೋಮವಾರ ಒಂದೇ ದಿನ 132 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1346ಕ್ಕೆ ಏರಿಕೆಯಾಗಿದೆ.
ತುಮಕೂರು ತಾಲೂಕಿನಲ್ಲಿ 56 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕುಣಿಗಲ್-22, ತುರುವೇಕೆರೆ-13, ತಿಪಟೂರು-9, ಮಧುಗಿರಿ-8, ಗುಬ್ಬಿ-6, ಶಿರಾ-5, ಪಾವಗಡ-5, ಚಿಕ್ಕನಾಯಕನಹಳ್ಳಿ ಹಾಗೂ ಕೊರಟಗೆರೆ ತಾಲೂಕಿನಲ್ಲಿ ತಲಾ 4 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
33 ಮಂದಿ ಗುಣಮುಖ: ಕರೊನಾ ಸೋಂಕಿನಿಂದ ಮುಕ್ತರಾಗಿ 33 ಮಂದಿ ಸೋಮವಾರ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಒಟ್ಟು 636 ಮಂದಿ ಗುಣಮುಖರಾಗಿ ಮನೆಗೆ ತೆರಳಿರುವುದು ಸಮಾಧಾನಕರವೆನಿಸಿದೆ. ಜಿಲ್ಲೆಯಲ್ಲಿ ಒಟ್ಟು 667 ಸಕ್ರಿಯ ಪ್ರಕರಣಗಳಿದ್ದು, 8 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆ ಬಲಿ: ಜಿಲ್ಲೆಯಲ್ಲಿ ಕರೊನಾ ಮತ್ತೊಂದು ಬಲಿ ಪಡೆದಿದೆ. ನಗರದ ಪಕೀರಪಾಳ್ಯದ 60 ವರ್ಷದ ವೃದ್ಧೆ ಜ್ವರ, ತೀವ್ರ ಉಸಿರಾಟ ತೊಂದರೆ, ನ್ಯುಮೋನಿಯಾದಿಂದ ಬಳಲುತ್ತಿದ್ದು ಜು.24 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. 25 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಸೋಮವಾರ ಕರೊನಾ ಸೋಂಕು ದೃಢಪಟ್ಟಿದ್ದು ಸೂಕ್ತ ಮುಂಜಾಗ್ರತಾ ಕ್ರಮವಹಿಸಿ ಅಂತ್ಯಕ್ರಿಯೆ ನಡೆಸಲಾಗಿತ್ತು.
ಸಬ್‌ರಿಜಿಸ್ಟ್ರಾರ್ ಕಚೇರಿ ಸೀಲ್‌ಡೌನ್: ತುರುವೇಕೆರೆ ತಾಲೂಕಿನಲ್ಲಿ ಒಂದೇ ದಿನ 13 ಮಂದಿಗೆ ಕರೊನಾ ಸೋಂಕು ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದೆ. ಪಟ್ಟಣದಲ್ಲಿ ಒಟ್ಟು 7 ಪ್ರಕರಣ ವರದಿಯಾಗಿವೆ. ಅಂಚೆ ಕಚೇರಿ ಸಿಬ್ಬಂದಿ ಹಾಗೂ ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿಗೆ ಕರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಚೇರಿಗಳನ್ನು ಸ್ಯಾನಿಟೈಸ್ ಮಾಡಿ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.
47 ಮಹಿಳೆಯರಲ್ಲಿ ಸೋಂಕು: ಸೋಂಕು ಕಾಣಿಸಿಕೊಂಡ 132 ಮಂದಿಯಲ್ಲಿ ಗರ್ಭಿಣಿ ಸೇರಿ 47 ಮಹಿಳೆಯರು ಇದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟ 15 ಮಂದಿಯಲ್ಲಿ 11 ಪುರುಷರು ಹಾಗೂ ನಾಲ್ವರು ಮಹಿಳೆ ಯರಿದ್ದಾರೆ. 5 ವರ್ಷಕ್ಕಿಂತ ಕಡಿಮೆ ಇಬ್ಬರು ಗಂಡುಮಕ್ಕಳಿಗೂ ಸೋಂಕು ತಗುಲಿದೆ. ತಿಪಟೂರಿನ ಪೊಲೀಸ್‌ಗೆ ಸೋಂಕು ದೃಢಪಟ್ಟಿದೆ. ಕುಣಿಗಲ್‌ನ 31 ವರ್ಷದ ಕೆಎಸ್‌ಆರ್‌ಟಿಸಿ ಮಹಿಳಾ ಕಂಡಕ್ಟರ್‌ಗೂ ಸೋಂಕು ತಗುಲಿದೆ.
ಮಹಾಲಕ್ಷ್ಮೀದೇವಿ ದರ್ಶನ ಭಾಗ್ಯ(ಮಧುಗಿರಿ): ಸೀಲ್‌ಡೌನ್ ಮಾಡಲಾಗಿದ್ದ ಕೊರಟಗೆರೆ ತಾಲೂಕು ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ ಜು.28ರಂದು ಬಾಗಿಲು ತೆರೆಯಲಿದೆ ಎಂದು ಎಸಿ ಡಾ.ಕೆ.ನಂದಿನಿದೇವಿ ತಿಳಿಸಿದರು.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಅರ್ಚಕರ ಪತ್ನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜು.20ರಿಂದ ದೇವಾಲಯ ಮುಚ್ಚಲಾಗಿತ್ತು. ಸದ್ಯ ದೇವಸ್ಥಾನವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಕರೊನಾ ಮುಂಜಾಗ್ರತಾ ಕ್ರಮ ಕೈಗೊಂಡು ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು. ಪಟ್ಟಣದ ಕೆ.ಆರ್.ಬಡಾವಣೆ ಮತ್ತು ಜೈನರ ಬಸದಿ ಮುಂಭಾಗದ ಬಡಾವಣೆಯಲ್ಲಿ ಹೆಚ್ಚಾಗಿ ಸೋಂಕು ಪತ್ತೆಯಾಗಿದ್ದು, ಈ ಭಾಗದ ನಾಗರಿಕರಿಗೆ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಡಾ.ಜಿ.ವಿಶ್ವನಾಥ್ ಮಾತನಾಡಿ, ಕರೊನಾ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿದ್ದು, ಸಾವಿನ ಪ್ರಕರಣಗಳೂ ಹೆಚ್ಚಾಗುತ್ತಿದೆ. ತಡವಾಗಿ ಆಸ್ಪತ್ರೆಗೆ ಬರುವುದು ಸಾವಿನ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣ. ಈ ಸಂದರ್ಭದಲ್ಲಿ ಆಮ್ಲಜನಕ ಶುದ್ಧತ್ವಮಟ್ಟ ಕಡಿಮೆಯಾಗುವುದರಿಂದ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ. ಆದ್ದರಿಂದ ಸಾರ್ವಜನಿಕರು ರೋಗ ಲಕ್ಷಣ ಅನುಭವಕ್ಕೆ ಬಂದರೂ ತಪಾಸಣೆಗೆ ಒಳಪಡಬೇಕು ಎಂದರು. ವೈದ್ಯರ ಸಲಹೆ ಮೇರೆಗೆ ಕೋವಿಡ್-19 ನಿಗಾ ಕೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದರು.