

ಗದಗ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಎಲ್ಲ ಇಲಾಖೆಗಳು ಸಮರ್ಥವಾಗಿ ಹಾಗೂ ಸಮನ್ವಯದಿಂದ ಎದುರಿಸಬೇಕು. ಚರಂಡಿ, ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವ ಮೂಲಕ ಮಳೆ ನೀರು ಮನೆಗಳಿಗೆ ನುಗ್ಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಪ್ರವಾಹದಿಂದ ಹಾನಿಗೊಳಗಾದ ರಸ್ತೆ ನಿರ್ವಿುಸುವುದು ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ತಕ್ಷಣ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಸಲ್ಲಿಸಬೇಕು. ಮನೆ ಹಾನಿ ಹಾಗೂ ಬೆಳೆ ಹಾನಿಗೆ ಅಧಿಕಾರಿಗಳು ಸ್ಪಂದಿಸಿ ನಿಖರ ಸಮೀಕ್ಷೆ ಕೈಗೊಂಡು ಪರಿಹಾರ ದೊರಕಿಸಲು ಶೀಘ್ರ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ನರಗುಂದ ತಾಲೂಕಿನ ಲಖಮಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿರ್ವಿುಸುತ್ತಿರುವ ಸೇತುವೆ ನಿರ್ಮಾಣ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಜಿಲ್ಲೆಯಲ್ಲಿ ಜರುಗಿದ ರೈತ ಆತ್ಮಹತ್ಯೆ ಪ್ರಕರಣಗಳ ಕುರಿತ ಅಂಕಿ ಅಂಶಗಳ ಪರಿಶೀಲಿಸಿದ ಅವರು, ಮೃತಕುಟುಂಬಕ್ಕೆ ಸರ್ಕಾರದ ಆರ್ಥಿಕ ಸೌಲಭ್ಯ ಶೀಘ್ರ ತಲುಪಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಮಾತನಾಡಿ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅನವಶ್ಯಕವಾಗಿ ಸಿಜೇರಿಯನ್ ಹೆರಿಗೆ ಆಗುವುದನ್ನು ನಿಯಂತ್ರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ನಾರ್ಮಲ್ ಹೆರಿಗೆಗಳು ಆಗುವಂತೆ ನಿಗಾ ವಹಿಸಲು ಆರೋಗ್ಯ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಕಾರ್ಯದರ್ಶಿಗಳು ತಪ್ಪಿತಸ್ಥ ವೈದ್ಯರು ಹಾಗೂ ಆಸ್ಪತ್ರೆಗಳ ಮೇಲೆ ಶಿಸ್ತು ಕ್ರಮ ಜರುಗಿಸಿ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ 9 ಮಾನವ ಜೀವ ಹಾನಿ ಸಂಭವಿಸಿದ್ದು 40 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 50 ಜಾನುವಾರು ಹಾನಿ ಸಂಭವಿಸಿದ್ದು 3.46 ಲಕ್ಷ ರೂ ಪರಿಹಾರ ನೀಡಲಾಗಿದೆ. ಮಳೆಯಿಂದ ಜಿಲ್ಲೆಯ 483 ಮನೆ ಹಾನಿ ಸಂಭವಿಸಿದ್ದು ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ನಿಯಮಾನುಸಾರ ಹಾನಿಯಾದ ಮನೆಗಳ ಪೈಕಿ 211 ಮನೆಗಳಿಗೆ 6.75 ಲಕ್ಷ ರೂ ಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದರು.
ಸರ್ಕಾರದ ಯೋಜನೆ ಸದ್ಬಳಕೆಯಾಗಲಿ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಅನುದಾನ ಒದಗಿಸುತ್ತಿದೆ. ಸರ್ಕಾರದ ಉದ್ದೇಶ ಸಫಲತೆಗಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಸೂಚಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ವಿವಿಧ ಇಲಾಖೆಗಳಿಗೆ ಕಾಮಗಾರಿಗಳ ಅನುಷ್ಠಾನ, ಫಲಾನುಭವಿಗಳ ಆಯ್ಕೆ ಸೇರಿದಂತೆ ಹಲವಾರು ಸಮುದಾಯದ ಅಭಿವೃದ್ಧಿಗೆ ನೀಡಲಾದ ಅನುದಾನವನ್ನು ನಿಗದಿಪಡಿಸಿದ ಅವಧಿಯೊಳಗೆ ಗುರಿ ಸಾಧನೆಗೆ ಕ್ರಮ ವಹಿಸಬೇಕು. ಕಾಮಗಾರಿಗಳು ಸಮುದಾಯದ ಕೇರಿಗಳಲ್ಲಿಯೇ ಅನುಷ್ಠಾನಗೊಳಿಸಬೇಕು ಹಾಗೂ ಆರ್ಥಿಕವಾಗಿ ಹಿಂದುಳಿದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ.ಮಾತನಾಡಿ, ಎಸ್ಸಿಪಿ, ಟಿಎಸ್ಪಿ ಪ್ರಗತಿ ಪರಿಶೀಲನೆ ಕೈಗೊಂಡು ಗುರಿ ಸಾಧನೆಗೆ ನಿರ್ದೇಶನ ನೀಡಲಾಗಿದೆ. ಹಲವಾರು ಇಲಾಖೆಗಳಿಗೆ ಕ್ರಿಯಾ ಯೋಜನೆ ಅನುಮೋದನೆ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಶೀಘ್ರ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ ಎಂದರು.
ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಾಗ ಗುಣಮಟ್ಟ ಕಾಯ್ದುಕೊಳ್ಳಬೇಕು. ಶಾಲಾ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟದಲ್ಲಿ ಗುಣಮಟ್ಟ ಹಾಗೂ ನಿಗದಿತ ಪ್ರಮಾಣದಲ್ಲಿ ನೀಡಬೇಕು. ಅಪೌಷ್ಟಿಕತೆ ಮಕ್ಕಳನ್ನು ಗುರುತಿಸುವಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಬಳಸಬೇಕು. ಅಪೌಷ್ಟಿಕತೆ ಮಕ್ಕಳನ್ನು ಗುರುತಿಸಿ ಆರೋಗ್ಯ ಸುಧಾರಣೆಗಾಗಿ ಸರ್ಕಾರದಿಂದ ಕೊಡಮಾಡುವ ಪೌಷ್ಟಿಕ ಆಹಾರ ತಲುಪಿಸಿ ಅಪೌಷ್ಟಿಕತೆ ನಿವಾರಣೆಗೆ ಮುಂದಾಗಬೇಕು. | ಮೊಹಮ್ಮದ್ ಮೊಹಸಿನ್