131 ಕಂದಾಯ ಗ್ರಾಮಗಳ ಘೋಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ

kdr mla-1
ಸೀಗೆಹಡ್ಲು ಗ್ರಾಮದಲ್ಲಿ ಭೂಗ್ಯಾರಂಟಿ ಯೋಜನೆಯಡಿ ಫಲಾನುಭವಿಗಳಿಗೆ ಶಾಸಕ ಕೆ.ಎಸ್.ಆನಂದ್ ಹಕ್ಕುಪತ್ರ ವಿತರಿಸಿದರು. ಸಿ.ಎಸ್.ಪೂರ್ಣಿಮಾ, ಭಂಡಾರಿ ಶ್ರೀನಿವಾಸ್, ಶೇಖರ್, ಪ್ರವೀಣ್, ಹರೀಶ್, ಮಲಿಯಪ್ಪ ಇತರರಿದ್ದರು.
Published on

ಕಡೂರು: ತಾಲೂಕಿನ 131 ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಸೀಗೆಹಡ್ಲು ಗ್ರಾಮದಲ್ಲಿ ಮಂಗಳವಾರ ಕಂದಾಯ, ಗ್ರಾಮೀಣಾಭಿವೃದ್ಧಿ, ಉಪನೋಂದಣಾಧಿಕಾರಿ ಇಲಾಖೆ ಆಶ್ರಯದಲ್ಲಿ 129 ಕುಟುಂಬಗಳಿಗೆ ಭೂಗ್ಯಾರಂಟಿ ಯೋಜನೆಯಡಿ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದರು. ಕ್ಷೇತ್ರದ ಬಹುತೇಕ ಹಿಂದುಳಿದಿದ್ದ ಗ್ರಾಮಗಳನ್ನು ಕಂದಾಯ ಗ್ರಾಮವಾಗಿ ಗುರುತಿಸಲು ತಾಂತ್ರಿಕ ಕಾರಣಗಳು ಅಡ್ಡಿಯಾಗಿದ್ದವು. 2023ರಲ್ಲಿ ಮೊದಲು ಸಮಸ್ಯೆಗಳನ್ನು ಬಗೆಹರಿಸಲು ಮುಂದಾದೆವು. ಘೋಷಣೆ ಆಗಬೇಕಿರುವ 131 ಗ್ರಾಮಗಳ ಪೈಕಿ 61 ಗ್ರಾಮಗಳನ್ನು ಕಂದಾಯ ಗ್ರಾಮವಾಗಿ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿಯೇ ಬಾಕಿ 71 ಗ್ರಾಮಗಳನ್ನೂ ಘೋಷಿಸಲಾಗುವುದು. ತಾಲೂಕು ಭೂಗ್ಯಾರಂಟಿ ಯೋಜನೆಯ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ದೂರದೃಷ್ಟಿಯ ಚಿಂತನೆಯಿಂದ 94ಸಿಗೆ ಬದಲಾವಣೆ ತಂದು ಕಂದಾಯ ಇಲಾಖೆ, ಸರ್ವೇ ಇಲಾಖೆ ಮತ್ತು ಉಪ ನೋಂದಣಾಧಿಕಾರಿ ಕಚೇರಿಗಳ ತಂತ್ರಾಂಶಗಳನ್ನು ಒಟ್ಟುಗೂಡಿಸಿ ಜನರಿಗೆ ಏಕಕಾಲದಲ್ಲಿ ಹಕ್ಕುಪತ್ರ, ಇ-ಸ್ವತ್ತು ಮತ್ತು ಆಸ್ತಿ ನೋಂದಣಿ ಪತ್ರವನ್ನು ಮನೆ ಬಾಗಿಲಿನಲ್ಲಿಯೇ ವಿತರಿಸಲಾಗುತ್ತಿದೆ. ಸೀಗೆಹಡ್ಲು ದೊಡ್ಡ ಗ್ರಾಮವಾಗಿ ಗುರುತಿಸಲ್ಪಟ್ಟಿದ್ದರೂ ಕಂದಾಯ ಗ್ರಾಮವಾಗಿರಲಿಲ್ಲ. ಈಗ ಗ್ರಾಮಸ್ಥರಿಗೆ ಸುದಿನವಾಗಿದ್ದು ಇಂದಿನಿಂದ ಇದು ಕಂದಾಯ ಗ್ರಾಮವಾಗಿದೆ. ಕೆಲವೇ ದಿನಗಳಲ್ಲಿ ಜಮೀನಿನ ಪಹಣಿಗಳು ಕೂಡಾ ಗ್ರಾಮದ ಹೆಸರಿನಲ್ಲಿ ದೊರೆಯಲಿವೆ. ರಾಜ್ಯ ಸರ್ಕಾರ ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಜನಪರ ಆಡಳಿತದ ಮೂಲಕ ನಿಮ್ಮ ಋಣ ತೀರಿಸಲು ಕೆಲಸ ಮಾಡುತ್ತಿದೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕಂದಾಯ ಸಚಿವ ಕೃಷ್ಣಬೈರೈಗೌಡರ ಜನಪರ ಚಿಂತನೆಗಳಿಂದ ಕಂದಾಯ ಇಲಾಖೆಗೆ ಹೊಸಸ್ಪರ್ಶ ಲಭಿಸಿದೆ. ಭೂಮಾಲಿಕತ್ವದ ಹಕ್ಕಿಗಾಗಿ ಸಾವಿರಾರು ಜನರ ಹಲವಾರು ವರ್ಷಗಳ ಕನಸು ನನಸಾಗುವ ಸಮಯ ಭೂಗ್ಯಾರಂಟಿ ಯೋಜನೆಯಿಂದಾಗಿ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಕ್ಷೇತ್ರದ ಶಾಸಕರು ಸ್ಪಂದಿಸುತ್ತಿದ್ದಾರೆ ಎಂದರು.

ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ದಾಖಲೆ ರಹಿತ ವಸತಿ ಪ್ರದೇಶಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ತಾಲೂಕು ಆಡಳಿತ ಸರ್ಕಾರದ ನಿರ್ದೇಶನದ ಮೇರೆಗೆ ಮುಂದಾಗಿದೆ. ಮಾರ್ಗಸೂಚಿಯಂತೆ 40 ಮನೆಗಳಿದ್ದು 250 ಜನ ವಾಸವಿದ್ದರೆ ಕಂದಾಯ ಗ್ರಾಮ ಎಂದು ಘೋಷಿಸಲಾಗುವುದು. ಇದರಿಂದಾಗಿ ನಿವಾಸಿಗಳಿಗೆ ಹಕ್ಕುಪತ್ರ, ಇ-ಸ್ವತ್ತು ಮತ್ತು ನೋಂದಣಿ ಪತ್ರವನ್ನೂ ಹಸ್ತಾಂತರಿಸಿ ಶಾಶ್ವತ ಮಾಲೀಕತ್ವ ನೀಡಲು ಸುಲಭವಾಗಲಿದೆ. ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಹಲವು ಇಲಾಖೆಗಳ ಸಹಕಾರವಿದ್ದು ಭೂಗ್ಯಾರಂಟಿ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ನೆರವಾಗಿದೆ ಎಂದರು.

ಕಾಮನಕೆರೆ ಗ್ರಾಪಂ ಅಧ್ಯಕ್ಷ ಶೇಖರ್, ತಾಪಂ ಮಾಜಿ ಅಧ್ಯಕ್ಷ ಸೀಗೆಹಡ್ಲು ಹರೀಶ್, ಗ್ರಾಪಂ ಸದಸ್ಯರಾದ ಮಲಿಯಪ್ಪ, ಶಿವಣ್ಣ, ಸೌಭಾಗ್ಯಾ, ಉಪನೋಂದಣಾಧಿಕಾರಿ ತುಳಸಿಲಕ್ಷ್ಮೀ, ಕೃಷಿ ಸಹಾಯಕ ನಿರ್ದೇಶಕ ಎಂ. ಅಶೋಕ್, ತೋಟಗಾರಿಕಾ ಸಹಾಯಕ ನಿರ್ದೇಶಕ ಜಯದೇವಪ್ಪ, ಕಂದಾಯ ನಿರೀಕ್ಷಕರಾದ ರವಿಕುಮಾರ್, ರವಿ, ಗ್ರಾಮ ಲೆಕ್ಕಾಧಿಕಾರಿ ದೀಪಾ, ಮಂಜುಳಾ, ಶಿಲ್ಪಾ, ಪಿಡಿಒ ನಾಗರಾಜ್, ಗ್ರಾಮದ ಮುಖಂಡರಾದ ಮೂರ್ತಪ್ಪ, ಗೋವಿಂದಪ್ಪ, ಹಳದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net