ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ
ಬದುಕು ಕಟ್ಟಿಕೊಳ್ಳಲು ನಗರ ಮತ್ತು ಪಟ್ಟಣ ಪ್ರದೇಶಕ್ಕೆ ವಲಸೆ ಹೋಗಿರುವ ಬಡ ಕುಟುಂಬಗಳ 1301 ಬಿಪಿಎಲ್ ಕಾರ್ಡ್‌ಗಳು ಅಮಾನತುಗೊಂಡಿದ್ದು, ಬಾಗೇಪಲ್ಲಿ ಮತ್ತು ಚೇಳೂರು ತಾಲೂಕಿನ ಈ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗಬೇಕಾಗಿರುವ ಉಚಿತ ಮತ್ತು ರಿಯಾಯತಿ ಸೌಲಭ್ಯಗಳು ಬಂದ್ ಆಗಿವೆ.
ಬಾಗೇಪಲ್ಲಿ ಮತ್ತು ಚೇಳೂರು ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 98 ನ್ಯಾಯಬೆಲೆ ಆಂಗಡಿಗಳಿದ್ದು, ಬಿಪಿಎಲ್, ಎಪಿಎಲ್, ಅಂತ್ಯೋದಯ ಸೇರಿ ಒಟ್ಟು 50,882 ಪಡಿತರ ಚೀಟಿದಾರರಿದ್ದಾರೆ. ಈಗ ಆಹಾರ ಇಲಾಖೆ ಹೊಸ ಕ್ರಮದ ಪರಿಣಾಮ 1554 ಪಡಿತರ ಚೀಟಿಗಳು ರದ್ದಾಗಿದ್ದು, ಎರಡು ತಾಲೂಕುಗಳ ಪಡಿತರ ಚೀಟಿದಾರ ಕುಟುಂಬಗಳ ಸಂಖ್ಯೆ 49,328ಕ್ಕೆ ಕಡಿತಗೊಂಡಿದೆ.
ರದ್ದುಗೊಂಡ ಕಾರ್ಡ್ ವಿವರ
ತೆರಿಗೆ ಪಾವತಿದಾರರ 244 ಪಡಿತರ ಚೀಟಿ, ಸರ್ಕಾರಿ ನೌಕರರ 9 ಪಡಿತರ ಚೀಟಿ, 6 ತಿಂಗಳಿನಿಂದ ಸತತವಾಗಿ ಆಹಾರ ಇಲಾಖೆಯ ಪಡಿತರ (ಅಕ್ಕಿ, ಗೋಧಿ, ರಾಗಿ) ಪಡೆಯದ 1301 ಬಿಪಿಎಲ್ ಕಾರ್ಡ್ ಸೇರಿ ಒಟ್ಟು 1,554 ಕುಟುಂಬಗಳ ಪಡಿತರ ಕಾರ್ಡ್‌ಗಳು ರದ್ದಾಗಿವೆ.
ಚಾಲ್ತಿಯಲ್ಲಿರುವ ಚೀಟಿದಾರರ ವಿವರ
40,895 ಬಿಪಿಎಲ್ ಕಾರ್ಡ್‌ದಾರರು, 5,951 ಅಂತ್ಯೋದಯ ಕಾರ್ಡ್‌ದಾರರು, 2,482 ಎಪಿಎಲ್ ಕಾರ್ಡ್‌ದಾರರ ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ.
1,301 ಕುಟುಂಬಗಳಿಗೆ ಸೌಲಭ್ಯ ಕಡಿತ
ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ ಹಣ ಸ್ಥಗಿತ, ಆಯುಷ್ಮಾನ್ ಭಾರತ್ ಯೋಜನೆ ವೈದ್ಯಕೀಯ ಸೌಲಭ್ಯಕ್ಕೆ ಅನರ್ಹತೆ, ಕೃಷಿ ಯೋಜನೆ ಸಬ್ಸಿಡಿ ಇಲ್ಲ, ಸರ್ಕಾರದ ವಿವಿಧ ಸೌಲಭ್ಯಗಳಿಗೆ ಬ್ರೇಕ್ ಬಿದ್ದಂತಾಗಿದೆ. ರಾಜ್ಯ ಸರ್ಕಾರವನ್ನು ಮೆಚ್ಚಿಸುವ ಭರಾಟೆಯಲ್ಲಿ ಆಹಾರ ಇಲಾಖೆಯ ಕೆಲ ಅಧಿಕಾರಿಗಳು ತೆರಿಗೆ ಪಾವತಿದಾರರ, ಸರ್ಕಾರಿ ನೌಕರರ ಪಡಿತರ ಕಾರ್ಡ್‌ಗಳನ್ನು ರದ್ದುಗೊಳಿಸಿರುವುದರ ಜತೆಗೆ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ 1301 ಬಿಪಿಎಲ್ ಕಾರ್ಡ್‌ಗಳನ್ನೂ ಅಮಾನತುಗೊಳಿಸಿರುವುದು ಅತ್ಯಂತ ಶೋಚನೀಯವಾಗಿದೆ.
ಪಡಿತರ ಚೀಟಿ ಕಳೆದುಕೊಂಡಿರುವ ಕುಟುಂಬ ಸದಸ್ಯರು ಪ್ರಸ್ತುತ ಪರಿಸ್ಥಿತಿಯಲ್ಲಿ ಮತ್ತೆ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳುವ ಶಕ್ತಿಯಿಲ್ಲದ ಕಾರಣ ಶಿಕ್ಷಣ, ಆರೋಗ್ಯ ಸೇರಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. - ಹೆಸರು ಹೇಳಲು ಇಚ್ಛಿಸದ ನ್ಯಾಯಬೆಲೆ ಅಂಗಡಿ ಮಾಲೀಕ, ಬಾಗೇಪಲ್ಲಿ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಬಿಪಿಎಲ್ ಕಾರ್ಡ್‌ನ ಪ್ರತಿಯೊಬ್ಬ ಸದಸ್ಯರಿಗೆ ತಲಾ 5 ಕೆಜಿಯಂತೆ ಅನ್ನಭಾಗ್ಯ ಅಕ್ಕಿ ನೀಡುತ್ತಿರುವುದು ಕೇಂದ್ರ ಸರ್ಕಾರ. ರಾಜ್ಯ ಸರ್ಕಾರ ನೀಡುತ್ತಿರುವ ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಸಾಧ್ಯವಾಗದೆ ವಿವಿಧ ಕ್ರಮ ತೆಗೆದುಕೊಳ್ಳುವ ನೆಪವೊಡ್ಡಿ ಬಡ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳಿಗೆ ಕತ್ತರಿ ಹಾಕಿರುವ ಸರ್ಕಾರ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗವಕಾಶಗಳಿಲ್ಲದೆ ನಗರ ಪ್ರದೇಶಕ್ಕೆ ವಲಸೆ ಹೋಗಿ ಕೂಲಿ ಕೆಲಸ ಮಾಡುತ್ತಿರುವ 1301 ಬಡ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನು ಅಮಾನತು ಮಾಡಿರುವ ಆಹಾರ ಇಲಾಖೆಯ ನಿರ್ಧಾರ ಸಮಂಜಸವಾಗಿಲ್ಲ. - ಮಲ್ಲಿಕಾರ್ಜುನರೆಡ್ಡಿ, ಬಿಜೆಪಿ ಮುಖಂಡ, ಬಾಗೇಪಲ್ಲಿ ಆಹಾರ ಇಲಾಖೆ ಆದೇಶದಂತೆ ಪರಿಶೀಲಿಸಿ ತೆರಿಗೆ ಪಾವತಿದಾರರ, ಸರ್ಕಾರಿ ನೌಕರರ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. 6 ತಿಂಗಳಿನಿಂದ ಸತತವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳದ ಪಡಿತರ ಚೀಟಿಗಳನ್ನು ಅಮಾನತುಗೊಳಿಸಿ ಅದೇಶಿಸಲಾಗಿದೆ. - ಪ್ರಭಾಕರ್, ಆಹಾರ ನಿರೀಕ್ಷಕ, ಆಹಾರ ಇಲಾಖೆ ಬಾಗೇಪಲ್ಲಿ