130 ಗಣಪತಿ ಮೂರ್ತಿ ತಯಾರಿಸಿದ ಸ್ನೇಹಿತರು

14-ANP-P1
ಆನಂದಪುರ ಸಮೀಪದ ದಾಸಕೊಪ್ಪ ವೃತ್ತದ ಬಳಿಯ ಮಳಿಗೆಯಲ್ಲಿ ಪವನ್ ಮತ್ತು ಸ್ನೇಹಿತರು ಗಣಪತಿ ಮೂರ್ತಿ ತಯಾರಿಕೆಯಲ್ಲಿ ನಿರತರಾಗಿರುವುದು.
Published on

ಆನಂದಪುರ: ಸಮೀಪದ ದಾಸಕೊಪ್ಪ ವೃತ್ತದ ಬಳಿಯ ಮಳಿಗೆಯೊಂದರಲ್ಲಿ ಸ್ಥಳೀಯ ಯುವ ಕಲಾವಿದ ಸ್ನೇಹಿತರು ಸೇರಿ ಈ ವರ್ಷ 130ಕ್ಕೂ ಅಧಿಕ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿದ್ದಾರೆ. ಗೌರಿ ಗಣಪತಿ ಹಬ್ಬ ಸಮೀಪಿಸಿದ ಕಾರಣ ದಿನವಿಡೀ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕಲಾವಿದರಾದ ಪವನ, ನಾಗೇಂದ್ರ, ಶಶಿಕುಮಾರ್ ಮತ್ತು ಇತರ ಸ್ನೇಹಿತರು ಕಳೆದ ಎರಡು ತಿಂಗಳಿನಿಂದ ಗಣಪತಿ ಮೂರ್ತಿ ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕುಂಸಿ ಸಮೀಪದ ಹಾರ‌್ನಹಳ್ಳಿಯಿಂದ ವಿಶೇಷ ಮಣ್ಣು ತರಿಸಿ ಹದಗೊಳಿಸಿದ್ದಾರೆ. ಅರ್ಧ ಅಡಿಯಿಂದ ಸುಮಾರು 5 ಅಡಿ ಎತ್ತರದ ವರೆಗಿನ ವಿವಿಧ ಅಳತೆಯ ಗಣಪತಿ ವಿಗ್ರಹ ತಯಾರಿಸಿದ್ದಾರೆ.
ಆದಿಶೇಷ ಸಹಿತ ಗಣಪ, ಏಳು ಹೆಡೆ ಸರ್ಪದ ನೆರಳಿನಲ್ಲಿ ಕುಳಿತ ಗಣಪ, ನಂದಿ, ನವಿಲು, ಆನೆ, ಸಿಂಹ, ಹುಲಿ ಇತ್ಯಾದಿ ಪ್ರಾಣಿಗಳ ಮೇಲೆ ಕುಳಿತ ಗಣಪ, ಶಿವ ಸಹಿತ ಗಣಪ, ಗರುಡ ಗಮನ ಗಣಪ, ವಿವೇಕಾನಂದರ ಪೇಟ ಧರಿಸಿದ ಗಣಪ ಇತ್ಯಾದಿ ಮೂರ್ತಿಗಳು ಜನರ ಗಮನ ಸೆಳೆಯುತ್ತಿದೆ.
ಗಣಪತಿ ಮೂರ್ತಿಗೆ ಬಣ್ಣ ಬಳಿಯುವುದು, ಮುಖ ವರ್ಣಿಕೆ, ಕಿರೀಟಾಲಂಕಾರ ಇತ್ಯಾದಿ ಕಾರ್ಯ ಭರದಿಂದ ಸಾಗಿದೆ. ಸುತ್ತಮುತ್ತಲ ಭಕ್ತರ ಮನೆ ಮತ್ತು ಸಾರ್ವಜನಿಕ ಗಣೋತ್ಸವ ಸಂಘ ಸಂಸ್ಥೆಗಳು ಇಲ್ಲಿನ ಗಣಪತಿಗೆ ಬೇಡಿಕೆ ಸಲ್ಲಿಸಿದ್ದಾರೆ. ಶನಿವಾರದಿಂದ ಗಣಪತಿ ವಿಗ್ರಹಗಳು ಭಕ್ತರ ಕೈ ಸೇರಲಿವೆ. ಶಾಲಾ ಮಕ್ಕಳು ಮತ್ತು ಸ್ಥಳೀಯ ಗ್ರಾಮಸ್ಥರು ವೀಕ್ಷಣೆಗೆ ಆಗಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net