

ಚಿಕ್ಕೋಡಿ: ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ರೂವಾರಿಗಳಾದ ಡಾ. ಪ್ರಭಾಕರ ಕೋರೆ, ಕಾರ್ಖಾನೆ ನಿರ್ದೇಶಕ ಅಮಿತ ಕೋರೆ ಹಾಗೂ ಆಡಳಿತ ಮಂಡಳಿ ಮೇಲೆ ವಿಶ್ವಾಸವಿಟ್ಟು ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಕಳುಹಿಸಿದ ರೈತರಿಗೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಧನ್ಯವಾದ ತಿಳಿಸಿದರು. ಇಲ್ಲಿನ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ಕಬ್ಬು ಕಟಾವು ಹಾಗೂ ಸಾಗಣೆ ಮಾಡಿದ ಮಖ್ತೆದಾರರಿಗೆ ಸೋಮವಾರ ಹಮ್ಮಿಕೊಂಡಿದ್ದ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಖಾನೆಯೊಂದಿಗೆ ಸತತ 30 ವರ್ಷಗಳಿಂದ ಕಬ್ಬು ಕಟಾವು ಮತ್ತು ಸಾಗಣೆ ಮಖ್ತೆ ಕೆಲಸ ನಿರ್ವಹಿಸುತ್ತಿರುವ ಮಖ್ತೆದಾರರು ದಿನದ ಬೇಡಿಕೆಯಂತೆ ಕಬ್ಬು ಕಟಾವು ಮಾಡಿ ಕಬ್ಬು ನುರಿಸುವ ಕೆಲಸಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು ಎಂದರು. ಕಾರ್ಖಾನೆ ಎಲ್ಲ ಅಧಿಕಾರಿಗಳು, ಕಾರ್ಮಿಕ, ಸಿಬ್ಬಂದಿ ಹಗಲಿರುಳು ಶ್ರಮಿಸಿದ ಫಲವಾಗಿ ಪ್ರಸಕ್ತ ಹಂಗಾಮನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ಮುಂಬರುವ ಹಂಗಾಮಿನಲ್ಲಿ ಕಾರ್ಖಾನೆ 13 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕರಾದ ಮಹಾವೀರ ಮಿರ್ಜಿ, ಚೇತನ ಪಾಟೀಲ, ಮಲ್ಲಪ್ಪ ಮೈಶಾಳೆ, ಮಹಾವೀರ ಕಾತ್ರಾಳೆ, ಭೀಮಗೌಡ ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಟಿ.ದೇಸಾಯಿ, ಪ್ರಧಾನ ವ್ಯವಸ್ಥಾಪಕ ಅರುಣ.ಎಸ್, ಎನ್.ಎಸ್.ಹಿರೇಮಠ ಇತರರಿದ್ದರು.