13 ರಂದು ತರಳಬಾಳು ಶ್ರೀಗಳ ಭೇಟಿಗೆ ನಿರ್ಧಾರ

CTD RITA SAGATANE -2----
Published on

ಚಿತ್ರದುರ್ಗ: ಹರಿದು ಹಂಚಿ ಹೋಗಿರುವ ಜಿಲ್ಲೆಯ ಎಲ್ಲ ರೈತ ಸಂಘಟನೆಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ರೈತ ಭವನದಲ್ಲಿ ಶನಿವಾರ ಸಮಾಲೋಚನಾ ಸಭೆ ನಡೆಯಿತು.

ರಾಜ್ಯರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಇಷ್ಟು ವರ್ಷಗಳ ಕಾಲ ರಾಜಕಾರಣಿಗಳನ್ನು ನಂಬಿ ಹಾಳಾಗಿದ್ದೇವೆ. ಇನ್ನು ಕಾಲ ಹರಣ ಮಾಡುವುದರಲ್ಲಿ ಅರ್ಥವಿಲ್ಲ. ಶಾಸಕ, ಸಂಸದರಿಂದ ಈವರೆಗೂ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನು ಮುಂದಾದರೂ ರೈತ ಸಂಘಟನೆಗಳೆಲ್ಲವೂ ಒಂದಾಗಿ ಹೋರಾಟ ನಡೆಸಬೇಕಿದೆ. ಎಲ್ಲ್ಲ ಕೆರೆಗಳಿಗೆ ನೀರು ತುಂಬಿಸುವ ಇಚ್ಛಾಶಕ್ತಿ ಸಿರಿಗೆರೆ ತರಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗಿದೆ. ಎಲ್ಲರೂ ಒಗ್ಗೂಡಿ ಜ.13ರಂದು ಶ್ರೀಗಳನ್ನು ಭೇಟಿಯಾಗಿ ನಮ್ಮ ಸಮಸ್ಯೆಗಳ ಕುರಿತು ಚರ್ಚಿಸೋಣ ಎಂದರು.

ಮುಖಂಡ ಆರ್.ಬಿ. ನಿಜಲಿಂಗಪ್ಪ ಮಾತನಾಡಿ, ತರಳಬಾಳು ಶ್ರೀಗಳಿಗೆ ಮಾತ್ರ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಶಕ್ತಿ ಇದೆ. ಎಲ್ಲರೂ ಸೇರಿ ಸ್ವಾಮೀಜಿ ಅವರನ್ನು ಭೇಟಿ ಮಾಡೋಣ ಎಂದರು.

ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸಮಾಧಿ ಬಳಿ ಕರಪತ್ರವಿಟ್ಟು ಎಲ್ಲ ರೈತ ಸಂಘಟನೆಗಳು ಒಂದಾಗಲಿ ಎಂದು ಪ್ರಾರ್ಥಿಸಿಕೊಂಡು ಬಂದಿದ್ದೇವೆ. ರೈತ ಪರ ಹೋರಾಟಗಳಲ್ಲಿ ಮೂರು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಮಕ್ಕಳ ಭವಿಷ್ಯಕ್ಕಾದರೂ ಎಲ್ಲ ಸಂಘಟನೆ ಗಳು ಒಂದಾಗಬೇಕಿದೆ ಎಂದರು.

ರೈತ ನಾರಪ್ಪ ಮಾತನಾಡಿ, ವೈಮನಸ್ಸು ತೊರೆದು ರೈತರು ಒಂದಾಗಿ ಸರ್ಕಾರದ ಮುಂದೆ ಶಕ್ತಿ ಪ್ರದರ್ಶಿಸಬೇಕಿದೆ ಎಂದರು. ರೈತ ಎಸ್.ಆರ್. ತಿಮ್ಮಯ್ಯ ಮಾತನಾಡಿದರು. ಜಿ.ಕೆ. ನಾಗರಾಜ್ ಚಿಕ್ಕಬ್ಬಿಗೆರೆ, ನಾಗರಾಜ್ ಮುದ್ದಾಪುರ, ಸಿದ್ದಪ್ಪ ಹಳಿಯೂರು, ಹಿರೇಕಬ್ಬಿಗೆರೆ ರಾಜಣ್ಣ, ಇಸಾಮುದ್ರ ಪ್ರಭಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net