ಮೈಸೂರು: ಯುವಿ ಪ್ರೊಡಕ್ಷನ್‌ನಲ್ಲಿ ನಿರ್ಮಾಣಗೊಂಡಿರುವ ‘13’ ಕನ್ನಡ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು, ರಾಜ್ಯದ ಇನ್ನೂ 40 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕೆ.ನರೇಂದ್ರಬಾಬು ತಿಳಿಸಿದರು.
ಬಹು ದಿನದ ಬಳಿಕ ರಾಘವೇಂದ್ರ ರಾಜ್‌ಕುಮಾರ್ ಅಭಿನಯಿಸಿದ್ದು, ನಟಿ ಶ್ರುತಿ, ಪ್ರಮೋದ್‌ಶೆಟ್ಟಿ ಸೇರಿದಂತೆ ಇನ್ನಿತರರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಚಿತ್ರ ಬಿಡುಗಡೆಯಾದ ಬಳಿಕ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಬೇಡಿಕೆ ಬಂದಿರುವುದು ಸಂತಸ ತಂದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
13 ಕೋಟಿ ರೂ.ಗಳನ್ನು ಸಾಗಿಸುವ ತಂಡ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿ ಮನೆಯಲ್ಲಿ ಬಚ್ಚಿಟ್ಟಿದ್ದು, ಅದರ ತಲಾಶ್‌ಗೆ ಬರುವ ಇನ್ಸ್‌ಪೆಕ್ಟರ್ ನಡುವೆ ನಡೆಯುವ ಸಂವಾದ, ಪತ್ತೆದಾರಿಕೆ, ತಿರುವುಗಳ ಸಂಗಮವೇ ಈ ಚಿತ್ರದ ಸಾರಾಂಶ ಎಂದು ಹೇಳಿದರು.
ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಮನರಂಜನಾ ಎಳೆ ಒಳಗೊಂಡಿರುವ ಈ ಚಿತ್ರ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಂಡಿದೆ. ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಬಳಿಕ ಕಡಿಮೆಯಾಗುವುದು ವಾಡಿಕೆ. ಆದರೆ ನಮ್ಮ ಚಿತ್ರ ಕಡಿಮೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡು ಹೆಚ್ಚು ಚಿತ್ರಮಂದಿರಗಳಿಂದ ಬೇಡಿಕೆ ಬಂದಿರುವುದು ಸಂತಸ ತಂದಿದೆ ಎಂದು ನಿರ್ಮಾಪಕ ಮಂಜುನಾಥ್‌ಗೌಡ ಹೇಳಿದರು.
ನಟರಾದ ರಾಘವೇಂದ್ರ ರಾಜ್‌ಕುಮಾರ್, ಪ್ರಮೋದ್ ಶೆಟ್ಟಿ ಇತರರು ಇದ್ದರು.