

ನಂಜನಗೂಡು: ತಾಲೂಕಿನ ಹೆಡಿಯಾಲ ಸುತ್ತಮುತ್ತಲಿನ 13 ಕೆರೆಗಳನ್ನು 35 ಕೋಟಿ ರೂ. ವೆಚ್ಚದಲ್ಲಿ ತುಂಬಿಸುವ ಮಹತ್ವಕಾಂಕ್ಷೆ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದಾರೆ. ಇದು ಈ ಭಾಗದ ರೈತರ ಬಹುಕಾಲದ ಬೇಡಿಕೆಯನ್ನು ಶಾಸಕ ಬಿ.ಹರ್ಷವರ್ಧನ್ ಈಡೇರಿಸಿದ್ದಾರೆ.
ತಾಲೂಕಿನ ಗಡಿಯಂಚಿನ ಹೆಡಿಯಾಲ ಭಾಗದ ಗ್ರಾಮಗಳು ಮಳೆಯಾಶ್ರಿತ ಪ್ರದೇಶದಿಂದ ಕೂಡಿದ್ದು ಅಂತರ್ಜಲ ಕುಸಿತದಿಂದಾಗಿ ಜನ-ಜಾನುವಾರು ಕುಡಿಯಲು, ಕೃಷಿಗೆ ನೀರಿನ ಬವಣೆ ಹೇಳತೀರದ್ದಾಗಿತ್ತು. ಈ ಭಾಗದಲ್ಲಿ ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ ಎಂಬ ಆಶಾಭಾವನೆ ಈ ಭಾಗದ ಜನರದ್ದಾಗಿತ್ತು. ಈ ಬಗ್ಗೆ ದಶಕಗಳಿಂದ ಜನರು ಬೇಡಿಕೆ ಇಟ್ಟಿದ್ದರೂ ಸಾಕಾರಗೊಂಡಿರಲಿಲ್ಲ. ಶಾಸಕ ಬಿ.ಹರ್ಷವರ್ಧನ್ ಈ ಭಾಗದ ಜನರ ಕೂಗಿಗೆ ಕಿವಿಕೊಡುವ ಮೂಲಕ ಕ್ರಿಯಾಯೋಜನೆ ಸಿದ್ಧಪಡಿಸಿ 35 ಕೋಟಿ ರೂ. ವೆಚ್ಚದಲ್ಲಿ 13 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿಸುವಂತೆ ಮಾಡಿರುವುದು ಈ ಭಾಗದ ನೀರಿನ ಬರ ನೀಗಿಸಿ ರೈತರ ಮೊಗದಲ್ಲಿ ಹರ್ಷದ ಹೊನಲು ಮೂಡಿಸಿದ್ದಾರೆ.
ಏನಿದು ಯೋಜನೆ?
ಸರಗೂರು ತಾಲೂಕಿನ ಮುಳ್ಳೂರು ಗ್ರಾಮದ ಬಳಿ ನುಗು ನದಿಯಿಂದ ನೀರೆತ್ತುವ ಮೂಲಕ ನಂಜನಗೂಡು ತಾಲೂಕಿನ 9 ಹಾಗೂ ಸರಗೂರು ತಾಲೂಕಿನ 4 ಸೇರಿ ಒಟ್ಟು 13 ಕೆರೆಯ ನೀರು ತುಂಬಿಸುವ ಮಹತ್ವಕಾಂಕ್ಷೆ ಯೋಜನೆಯಿಂದ ನೀರಾವರಿಯೇತರ ಮಳೆ ಭಾದಿತ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಸದರಿ ಯೋಜನೆಯಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದಕ್ಕೆ ಹಾಗೂ ಅಂಜರ್ತಲ ಮಟ್ಟ ಸುಧಾರಣೆಯಾಗಲಿದೆ.
ನಂಜನಗೂಡು ತಾಲೂಕಿನ ಚಿಲಕಹಳ್ಳಿ ಕೆರೆ, ಪಾರ್ವತಿಪುರ ಕಳ್ಳನಕಟ್ಟೆ, ಹೆಡಿಯಾಲ ಕೆರೆ, ವೆಂಕಟಾಚಲಪುರ ಕುದುರೆಗುಂಡಿ ಕೆರೆ, ಕಂದೇಗಾಲ ಕೆರೆ ಮತ್ತು ಕಟ್ಟೆ, ಬೀರೆದೇವನಪುರ ಆಮಕಹಳ್ಳಿ ಕೆರೆ, ಹೊಸವೀಡು ಕೆರೆ, ಮಡುವಿನಹಳ್ಳಿ ಕೆರೆ ಹಾಗೂ ಸರಗೂರು ತಾಲೂಕಿನ ಬಡಗಲಪುರ ಕೆರೆ, ಹೊಸಬೀರ‌್ವಾಳು ಜೋಡಿ ಕೆರೆ, ಹೊಸಹೆಗ್ಗಡುಲು ಕೆರೆ ಹಾಗೂ ಚೆಂಗೌಡನಹಳ್ಳಿ ಕೆರೆಗಳು ಈ ಯೋಜನೆ ವ್ಯಾಪ್ತಿಗೆ ಬರಲಿವೆ. ಒಟ್ಟು 0.108 ಟಿಎಂಸಿ ನೀರು ಬಳಕೆಯಾಗಲಿದೆ.
ಈ ಗ್ರಾಮಗಳನ್ನು ಬರಪೀಡಿತ ಪ್ರದೇಶವೆಂದು ಗುರುತಿಸಲಾಗಿದ್ದು, ವಾರ್ಷಿಕ ಸರಾಸರಿ ಮಳೆ ಬಹಳ ಕಡಿಮೆ ಇದೆ. ಬಹಳಷ್ಟು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರಿನ ಲಭ್ಯತೆ ಇಲ್ಲದೆ ಸುಮಾರು 600 ಅಡಿ ಆಳದವರೆಗೆ ಕೊರೆಯಲಾಗಿರುವ ಕೊಳವೆ ಬಾವಿಗಳಲ್ಲಿ ದೊರೆಯುವ ಅಲ್ಪ ಪ್ರಮಾಣದ ನೀರು ಸಹ ನೈಟ್ರೈಟ್ ಯುಕ್ತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಈ ಭಾಗದ ಕೆರೆಗಳು ತುಂಬಿದರೆ ನೀರಿನ ಬವಣೆ ನೀಗಲಿದೆ.
ಭಗೀರಥ ಯತ್ನ ಸಫಲ:
ಬರಪೀಡಿತ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ ಕಾರ್ಯಗತಗೊಳಿಸಬೇಕೆಂಬ ಶಾಸಕ ಬಿ.ಹರ್ಷವರ್ಧನ್ ಭಗೀರಥ ಪ್ರಯತ್ನ ಫಲವಾಗಿ 80 ಕೋಟಿ ರೂ. ವೆಚ್ಚದ ನುಗು ಏತ ನೀರಾವರಿ ಹಾಗೂ 35 ಕೋಟಿ ರೂ. ವೆಚ್ಚದ ಹೆಡಿಯಾಲ ಭಾಗದ ಕೆರೆ ತುಂಬಿಸುವ ಯೋಜನೆ ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದಾರೆ.
ನಾನು ಚುನಾವಣೆ ಸಂದರ್ಭದಲ್ಲಿ ಹೆಡಿಯಾಲ, ಹುರಾ, ಹುಲ್ಲಹಳ್ಳಿ ಭಾಗಕ್ಕೆ ತೆರಳಿದ ಸಂದರ್ಭದಲ್ಲಿ ನುಗು ಏತ ನೀರಾವರಿ ಹಾಗೂ ಹೆಡಿಯಾಲ ಭಾಗದ ಕೆರೆ ತುಂಬಿಸುವ ಯೋಜನೆ ಜಾರಿ ಮಾಡಬೇಕು, ನಮ್ಮ ದಶಕಗಳ ಕೂಗಿಗೆ ಯಾರೂ ಕಿವಿಕೊಡುತ್ತಿಲ್ಲ ಎಂದು ಜನರು ಮನವಿ ಮಾಡಿದ್ದರು. ನಾನು ಶಾಸಕನಾಗುವ ಮುನ್ನವೇ ಆಶ್ವಾಸನೆ ನೀಡಿದ್ದೆ. ಅದರಂತೆ ಇದೀಗ ಈ ಎರಡು ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಶಿಲಾನ್ಯಾಸ ನೆರವೇರಿಸುವುದಾಗಿ ತಿಳಿಸಿದ್ದಾರೆ.ಬಿ.ಹರ್ಷವರ್ಧನ್, ಶಾಸಕ ನಂಜನಗೂಡು