ಕಲುಷಿತ ನೀರು ಸೇವಿಸಿ 13 ಕುರಿ, ಎಮ್ಮೆ ಸಾವು

21Ram2
ರಾಮದುರ್ಗ ತಾಲೂಕಿನ ರೊಕ್ಕದಕಟ್ಟಿ ಗ್ರಾಮದ ಹಳ್ಳದ ನೀರಿಗೆ ಕಾರ್ಖಾನೆಯ ತಾಜ್ಯ ಸೇರ್ಪಡೆಯಾಗಿ ಕಲುಷಿತಗೊಂಡಿರುವುದು.
Published on

ರಾಮದುರ್ಗ: ತಾಲೂಕಿನ ರೊಕ್ಕದಕಟ್ಟಿ ಗ್ರಾಮದಲ್ಲಿ ಹಳ್ಳದ ಕಲುಷಿತ ನೀರು ಸೇವಿಸಿ 13 ಕುರಿ, ಒಂದು ಎಮ್ಮೆ ಮೃತಪಟ್ಟಿದ್ದು, ಇದಕ್ಕೆ ಖಾಸಗಿ ಸಕ್ಕರೆ ಕಾರ್ಖಾನೆಯ ನೀರು ಹಳ್ಳಕ್ಕೆ ಸೇರಿದ್ದೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾರ್ಖಾನೆಯ ತ್ಯಾಜ್ಯವನ್ನು ಹಳ್ಳದ ಪಕ್ಕ ಟ್ಯಾಂಕರ್‌ನಲ್ಲಿ ತಂದು ಹಾಕಲಾಗುತ್ತಿದೆ. ಕೆಲವು ದಿನಗಳಿಂದ ಮಳೆಯಿಂದ ಈ ತ್ಯಾಜ್ಯ ಹಳ್ಳ ಸೇರಿ ನೀರು ಕಲುಷಿತವಾಗಿದೆ.

ಈ ನೀರು ಸೇವಿಸಿಯೇ ಕುರಿ, ಎಮ್ಮೆ ಮೃತಪಟ್ಟಿವೆ ಎಂಬ ಆರೋಪ ಗ್ರಾಮಸ್ಥರದ್ದು. ಗ್ರಾಮದ ಪಕ್ಕದಲ್ಲಿರುವ ಹಳ್ಳದ ಸಮೀಪವೇ ಗ್ರಾಮಕ್ಕೆ ಸರಬರಾಜು ಮಾಡುತ್ತಿರುವ ಕುಡಿಯುವ ನೀರಿನ ಬೋರ್‌ವೆಲ್ ಇದ್ದು, ಬೋರ್‌ವೆಲ್‌ಗೆ ಕಲುಷಿತ ನೀರು ಸೇರಿಕೊಂಡು ಅದನ್ನೆ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಸದ್ಯಕ್ಕೆ ಬೋರ್‌ವೆಲ್ ನೀರನ್ನು ದಿನಬಳಕೆಗೆ ಮಾತ್ರ ಉಪಯೋಗ ಮಾಡಬೇಕು ಎಂದು ಗ್ರಾಪಂ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕುಡಿಯಲು ಪಂಚಗಾಂವ್ ಗ್ರಾಮದ ಬೋರ್‌ವೆಲ್ ನೀರು ತಾತ್ಕಾಲಿಕವಾಗಿ ಸರಬರಾಜು ಮಾಡಲಾಗುತ್ತಿದೆ.

ಗ್ರಾಮಸ್ಥರಲ್ಲಿ ಸಷ್ಟಿಯಾಗಿರುವ ಆತಂಕದ ಕುರಿತು ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರನ್ನು ವಿಚಾರಿಸಿದಾಗ ಅಲ್ಲಿರುವ ಸಮಸ್ಯೆ ಬಗೆಹರಿಸಲು ತಾ.ಪಂ, ಗ್ರಾ.ಪಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಮಸ್ಯೆಯ ನೈಜತೆಯ ಬಗ್ಗೆ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net