ಪ್ರತ್ಯೇಕ ಅಪಘಾತದಲ್ಲಿ 13 ಜನರಿಗೆ ಗಾಯ

YLP ACCIDENT
Published on

ಯಲ್ಲಾಪುರ: ಎರಡು ಪ್ರತ್ಯೇಕ ಅಪಘಾತಗಳಲ್ಲಿ 13 ಜನರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಇಡಗುಂದಿ ಸಮೀಪ ಮಂಗಳವಾರ ಸಂಭವಿಸಿದೆ.

ಇಡಗುಂದಿ ಶಾಲೆಯ ಎದುರು ಟಿಟಿ ವಾಹನ ಹಾಗೂ ಲಾರಿ ನಡುವೆ ಅಪಘಾತ ಉಂಟಾಗಿದ್ದು, ಟಿಟಿ ವಾಹನ ಪಲ್ಟಿಯಾಗಿದೆ. ವಾಹನದಲ್ಲಿದ್ದ 13 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ತೀವ್ರವಾಗಿ ಗಾಯಗೊಂಡ ಹೊಸಪೇಟೆಯವರಾದ ಗಾದೇಶ ಕೆ.ಬಿ., ಪ್ರಜ್ವಲ್ ಉಮೇಶ, ಸಿದ್ದಾರಾಮ ಹೊಸಗೇರಪ್ಪ, ಎರಿಸ್ವಾಮಿ ಕಲ್ಲುವಡ್ಡೆಪ್ಪ, ನಾಗರಾಜ ಹನುಮಂತಪ್ಪ, ಶ್ರೀಕಾಂತ ಸಿದ್ದಪ್ಪ ಉಕ್ಕಳ್ಳಿ ಹಾಗೂ ಮಹೇಶ ಕೋರಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕೆಎಂಸಿಆರ್​ಐಗೆ ದಾಖಲಿಸಲಾಗಿದೆ.

ಸಾಗರ ವೀರಭದ್ರ, ಕುಮಾರ ಕೊರವರ, ನವೀನಕುಮಾರ, ಪಿ.ಕಾರ್ತಿಕ ದೊಡ್ಡಬಸಪ್ಪ, ಗಾದಿಲಿಂಗ ಶೆಕ್ಸವಲ್ಲಪ್ಪ ಹಾಗೂ ರಾಜು ಎರಿಸ್ವಾಮಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರೆಲ್ಲ ವಿಜಯನಗರ ಜಿಲ್ಲೆಯ ಹೊಸಪೇಟೆಯವರಾಗಿದ್ದು, ಕರಾವಳಿ ಭಾಗಕ್ಕೆ ಪ್ರವಾಸಕ್ಕೆಂದು ಟಿಟಿ ವಾಹನದಲ್ಲಿ ಬಂದಿದ್ದರು. ಮರಳಿ ಊರಿಗೆ ಹೋಗುವಾಗ ಇಡಗುಂದಿ ಬಳಿ ಲಾರಿಯೊಂದನ್ನು ಓವರ್​ಟೇಕ್ ಮಾಡಲು ಹೋಗಿ ಎದುರಿನಿಂದ ಬಂದ ಲಾರಿಗೆ ಟಿಟಿ ವಾಹನ ಗುದ್ದಿದೆ. ಲಾರಿ ಚಾಲಕ ಹಾಗೂ ಟಿಟಿ ವಾಹನದ ಚಾಲಕನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಡಗುಂದಿ ಸಮೀಪದ ಚಿನ್ನಾಪುರ ಬಳಿ ಕೆಎಸ್​ಆರ್​ಟಿಸಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಹಾವೇರಿಯಿಂದ ಕಾರವಾರಕ್ಕೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್ ಹಾಗೂ ಮಂಗಳೂರಿನಿಂದ ಹೊಸಪೇಟೆಗೆ ಹೊರಟಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಘಟನೆಯಿಂದ ಎರಡೂ ವಾಹನಗಳು ಜಖಂಗೊಂಡಿವೆ. ಯಾರಿಗೂ ಗಾಯ, ನೋವು ಉಂಟಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net