13 ಸದಸ್ಯರು ಅವಿರೋಧ ಆಯ್ಕೆ

IMG-20230924-WA0423
Published on

ಆಲೂರು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ 14 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜಗದೀಶ್ ಕಬ್ಬಿನಹಳ್ಳಿ ಬಣದ 13 ಮತ್ತು ಬಿಜೆಪಿ ಬೆಂಬಲಿತ ಒಬ್ಬರು ಸದಸ್ಯರು ಚುನಾಯಿತರಾದರು.

ಪಟ್ಟಣದ ಆಲೂರು ತಾಲೂಕಿನ ಟಿಎಪಿಸಿಎಂಎಸ್ ಸಂಘದ ಆವರಣದಲ್ಲಿ ಭಾನುವಾರ ಚುನಾವಣೆ ನಡೆಸಲಾಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ಹಾಲಿ ಅಧ್ಯಕ್ಷ ಜಗದೀಶ್ ಕಬ್ಬಿನಹಳ್ಳಿ ಬಣದ 11 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಸನ ಸಹಕಾರ ಸಂಘಗಳ ಸಹಾಯ ನಿಬಂಧಕಿ ಮಮತಾ ಹಾಗೂ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ಬಾಲಲೋಚನಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಬಿಸಿಎಂಬಿ ಸ್ಥಾನಕ್ಕೆ ಮಾವನೂರು ಮೋಹನ್ ಮತ್ತು ಹಳೇ ಆಲೂರು ಸಂದೇಶ್ ಸ್ಪರ್ಧಿಸಿದ್ದರು. ಮೋಹನ್‌ಕುಮಾರ್ 156 ಮತಗಳನ್ನು ಪಡೆದು ಜಯ ಗಳಿಸಿದರೆ ಹಳೇ ಆಲೂರು ಸಂದೇಶ್ 146 ಮತಗಳನ್ನು ಪಡೆದು ಪರಾಭವಗೊಂಡರು. ಸಾಮಾನ್ಯ ಕ್ಷೇತ್ರಕ್ಕೆ ಮೂರು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬೈರಾಪುರ ಅಶೋಕ್ 175, ಆರ್.ಎಸ್.ನಟರಾಜ್ 193 ಮತಗಳನ್ನು ಪಡೆದು ಜಯ ಗಳಿಸಿದರೆ, ಮಲ್ಲೇಶ್ 139 ಮತಗಳನ್ನು ಪಡೆದು ಪರಾಭವಗೊಂಡರು.

ಜಗದೀಶ್ ಕಬ್ಬಿನಹಳ್ಳಿ ಬಣದ ಪುಟ್ಟರಾಜು ಹುಣಸವಳ್ಳಿ, ಚಂದ್ರಶೆಟ್ಟಿ ಅಬ್ಬನ, ಆನಂದ್ ಹುಲ್ಲಹಳ್ಳಿ, ತೌಫಿಕ್ ಆಲೂರು, ಪವಿತ್ರಾ ಜಗದೀಶ್ ಕಬ್ಬಿನಹಳ್ಳಿ, ಆಶಾ ಮಲ್ಲಿಕಾರ್ಜುನ ಆಲೂರು, ದೇವರಾಜು ಪಟ್ಣ, ಶಿವಣ್ಣ ಆಲೂರು, ರುದ್ರೇಗೌಡ ಕಿರಗಡಲು, ಶ್ರೀನಿವಾಸ್ ವಾಟೆಹೊಳೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಜಿಲ್ಲಾ ಬಿಜೆಪಿ ಹಿರಿಯ ಮುಖಂಡ ಎ.ಎಚ್.ರಮೇಶ್, ಕಣಗಾಲ್ ಲೋಕೇಶ್, ಅಜಿತ್ ಚಿಕ್ಕಕಣಗಾಲು, ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ನೂತನವಾಗಿ ಆಯ್ಕೆಯಾದ ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net