ಕರೊನಾ ಸೋಂಕು ಹರಡುವಿಕೆ ತೀವ್ರ

12HSN1
Published on


ವಿಜಯವಾಣಿ ಸುದ್ದಿಜಾಲ ಹಾಸನ
ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಬಳಿಕ ಇದೀಗ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೂ ಕರೊನಾ ಸೋಂಕು ಹರಡುವಿಕೆ ತೀವ್ರಗೊಂಡಿದ್ದು ಎಲ್ಲರಲ್ಲೂ ಆತಂಕ ಹೆಚ್ಚಾಗಿದೆ.
ಕರ್ತವ್ಯ ನಿರತರಾಗಿದ್ದ 13 ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. 57 ವರ್ಷದ ನೌಕರ ಭಾನುವಾರ ಮೃತಪಟ್ಟಿದ್ದು, ಮತ್ತೊಬ್ಬರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 11 ಸಿಬ್ಬಂದಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಪ್ರತಿದಿನ 50 ಸಿಬ್ಬಂದಿಯ ಸ್ವಾೃಬ್ ಟೆಸ್ಟ್ ಮಾಡಲಾಗುತ್ತಿದ್ದು, ಪಾಸಿಟಿವ್ ಬೆಳಕಿಗೆ ಬರುತ್ತಿರುವುದು ಇತರ ನೌಕರರಲ್ಲಿ ಆತಂಕ ಹುಟ್ಟುಹಾಕಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆ ಹಾಗೂ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡುವುದೇ ಸಾಹಸದ ಕೆಲಸವಾಗಿದೆ. ಆದರೆ, ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಬಸ್ ನಿಲ್ದಾಣ ಹಾಗೂ ಡಿಪೋಗಳಲ್ಲಿ ಪರಸ್ಪರ ಅಂತರ ಕಾಪಾಡುವಂತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ್ದಾರೆ.
ಪ್ರಯಾಣಿಕರ ಕೊರತೆ: ಸರ್ಕಾರದ ನಿರ್ದೇಶನದಂತೆ ಲಾಕ್‌ಡೌನ್ ತೆರವಿನ ಬಳಿಕ ತಾಲೂಕು, ಹೊರ ಜಿಲ್ಲೆ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಬಸ್ ಸಂಚಾರ ಪ್ರಾರಂಭಿಸಲಾಗಿದೆಯಾದರೂ ಪ್ರಯಾಣಿಕರ ಕೊರತೆ ಕಾಡುತ್ತಿದೆ. ಲಾಕ್‌ಡೌನ್ ವಾಪಸ್ ಪಡೆದ ಆರಂಭದ ದಿನಗಳಲ್ಲಿ 80 ಬಸ್‌ಗಳನ್ನು ಮಾತ್ರ ಬಿಡಲಾಗಿತ್ತು. ನಂತರದ ದಿನಗಳಲ್ಲಿ ಅದು 250 ಬಸ್‌ವರೆಗೆ ತಲುಪಿತ್ತು. ಜಿಲ್ಲೆಯಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಓಡಾಟ ಕಡಿಮೆಯಾಗಿದ್ದು, ಮತ್ತೆ 80 ಬಸ್‌ಗಳನ್ನು ಮಾತ್ರ ರಸ್ತೆಗೆ ಬಿಡುವ ನಿರ್ಧಾರಕ್ಕೆ ಕೆಎಸ್‌ಆರ್‌ಟಿಸಿ ಬಂದಿದೆ.
ಉತ್ತಮ ಬೆಂಬಲ:
ಕರೊನಾ ಓಟಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಸರ್ಕಾರ ಘೋಷಿಸಿದ್ದ ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ರಜಾ ದಿನವಾದ್ದರಿಂದ ಭಾನುವಾರ ಸರ್ಕಾರಿ ನೌಕರರು, ಸಾರ್ವಜನಿಕರು ಮನೆಯಿಂದ ಹೊರಗೆ ಬರಲಿಲ್ಲ. ಬೈಕ್‌ಗಳನ್ನು ಹೊರತುಪಡಿಸಿದರೆ ಬೇರೆ ಯಾವ ವಾಹನಗಳು ರಸ್ತೆಗೆ ಇಳಿಯಲಿಲ್ಲ. ದಿನಸಿ, ತರಕಾರಿ, ಹಾಲು ಮಾರಾಟ ಅಂಗಡಿಗಳು ಬೆಳಗ್ಗೆ 10ರ ವರೆಗೆ ತೆರೆದಿದ್ದವು. ಪೆಟ್ರೋಲ್ ಬಂಕ್‌ಗಳು ಮಧ್ಯಾಹ್ನದ ವರೆಗೆ ಮಾತ್ರ ಕಾರ್ಯ ನಿರ್ವಹಿಸಿದವು.


ಕೆಎಸ್‌ಆರ್‌ಟಿಸಿ ಸಿಬ್ಬಂದಿಯಲ್ಲಿ ಕರೊನಾ ಕಾಣಿಸಿಕೊಂಡಿದ್ದು ಆಸ್ಪತ್ರೆಯಲ್ಲಿರುವ 11 ಜನರು ಆರೋಗ್ಯದಿಂದ ಇದ್ದಾರೆ. ಇನ್ನೆರಡು ದಿನಗಳಲ್ಲಿ ಅವರೆಲ್ಲ ಡಿಸ್ಚಾರ್ಜ್ ಆಗುತ್ತಾರೆ. ಪ್ರಯಾಣಿಕರಿಲ್ಲದ ಕಾರಣ ಅಗತ್ಯಕ್ಕೆ ತಕ್ಕಷ್ಟು ಬಸ್‌ಗಳನ್ನು ಮಾತ್ರ ಬಿಡಲಾಗುತ್ತಿದೆ.
ರಾಜೇಶ್ ಶೆಟ್ಟಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net