ಮಾಟ ಮಂತ್ರದ ಹೆಸರಲ್ಲಿ 13.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸ್ವಾಹ !

vinobanagara police station
ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ
Published on

ಶಿವಮೊಗ್ಗ: ಸೋಮಿನಕೊಪ್ಪ ಭೋವಿ ಕಾಲನಿಯಲ್ಲಿ ಮಾಟ ಮಂತ್ರದ ಹೆಸರಲ್ಲಿ ಕುಟುಂಬದ ಸಮಸ್ಯೆಗೆ ಪರಿಹರಿಸುವುದಾಗಿ ಹೇಳಿ ಮಹಿಳೆಗೆ ಮೂರುವರೆ ಲಕ್ಷ ರೂ. ನಗದು ಹಾಗೂ 13.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಶ್ರೀನಿವಾಸ ಬಳ್ಳಾರಿ ಎಂಬಾತ ವಂಚಿಸಿದ್ದು 32 ವರ್ಷದ ಸೋಮಿನಕೊಪ್ಪದ ಭೋವಿ ಕಾಲನಿ ಮಹಿಳೆ ವಂಚನೆಗೆ ಒಳಗಾದವರು. ಶ್ರೀನಿವಾಸ ಭೋವಿ ಕಾಲನಿಯ ನಿವಾಸಿಗಳಿಗೆ ಭದ್ರಾವತಿಯಲ್ಲಿ ಸಿಕ್ಕಿದ್ದ. ಒಬ್ಬರ ಮನೆಗೆ ಹೋಗಿದ್ದ ಆತ ನಿಮಗೆ ಮಾಟ ಮಾಡಿದ್ದಾರೆಂದು ಹೇಳಿ ಬೆನ್ನಿನಿಂದ ತಗಡು ತೆಗೆದು ನಂಬಿಸಿದ್ದ. ಅದನ್ನು ನೋಡಿದ್ದ ಮಹಿಳೆಯು ನನಗೂ ಆರೋಗ್ಯ ಸರಿ ಇಲ್ಲ. ನಾನು ತೋರಿಸಬೇಕೆಂದು ಕೇಳಿಕೊಂಡು ತಮ್ಮ ಮನೆಗೆ ಆಹ್ವಾನಿಸಿದ್ದರು. ವಿಳಾಸ ಪಡೆದಿದ್ದ ವಂಚನ ಮಾಂತ್ರಿಕನ ವೇಷದಲ್ಲಿ ಮೇ ತಿಂಗಳಲ್ಲಿ ಮಹಿಳೆ ಮನೆಗೆ ತೆರಳಿ ನಿಮ್ಮ ಮನೆಯಲ್ಲಿ ಬಹಳ ತೊಂದರೆ ಇದ್ದು ಅವುಗಳನ್ನು ಪರಿಹರಿಸುತ್ತೇನೆಂದು ನಂಬಿಸಿದ್ದ.
ಅದಕ್ಕೆ ಮನೆಯಲ್ಲಿರುವ ಎಲ್ಲ ಒಡವೆಗಳನ್ನಿಟ್ಟು ಪೂಜೆ ಮಾಡಬೇಕೆಂದು ಹೇಳಿದ್ದ. ಆತನ ಮಾತು ನಂಬಿದ್ದ ಮಹಿಳೆ ಮನೆಯಲ್ಲಿದ್ದ 34 ತೊಲ ಒಡವೆಗಳನ್ನು ಆತನಿಗೆ ಕೊಟ್ಟಿದ್ದರು. ನಾನು ಬಾಗಿಲು ಹಾಕಿಕೊಂಡು ಪೂಜೆ ಮಾಡುತ್ತೇನೆ. ನೀವು ಯಾರೂ ಬರಬಾರದೆಂದು ಅವನೇ ಒಂದು ಪೆಟ್ಟಿಗೆ ತಂದು ಒಡವೆಗಳನ್ನಿಟ್ಟು ಪೂಜೆ ಮಾಡಿದ್ದ. ನಂತರ 54 ದಿನ ನೀವು ಪೂಜೆ ಮಾಡಿ ನಂತರ ನಾನೇ ಬಂದು ನಿಮ್ಮ ಎಲ್ಲ ಒಡವೆಗಳನ್ನು ಕೊಟ್ಟು ಹೋಗುತ್ತೇನೆಂದು ನಂಬಿಸಿದ್ದ.
54 ದಿನ ಆದ ನಂತರ ಮಹಿಳೆ ಪೋನ್ ಮಾಡಿದ್ದು ಮನೆಗೆ ಬರುವುದಾಗಿ ಹೇಳಿದ್ದ ಶ್ರೀನಿವಾಸ್ ಮಧ್ಯದಲ್ಲಿ ಮಹಿಳೆಯಿಂದ ಪೂಜೆಗೆ ಹಣ ಬೇಕೆಂದು 50 ಸಾವಿರ ರೂ., ಕುರಿ ಕೋಳಿ ಬಲಿಕೊಡಬೇಕೆಂದು ಮೂರು ಲಕ್ಷ ರೂ. ಪಡೆದಿದ್ದ. ಆ.23ರಂದು ಪೋನ್ ಮೂಲಕ ಮಾತನಾಡಿದ ಮಹಿಳೆ ನಮಗೆ ಒಡವೆಗಳನ್ನು ಕೊಡಿ ಎಂದು ಕೇಳಿದ್ದರು. ಮರುದಿನ(ಆ.24)ದಿಂದ ಆತ ಫೋನ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಅನುಮಾನ ಬಂದು ಪೆಟ್ಟಿಗೆ ತೆಗೆದು ನೋಡಿದಾಗ ನಕಲಿ ಚಿನ್ನಾಭರಣಗಳನ್ನು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. 40 ಗ್ರಾಂನ ನಾಲ್ಕು ಚೈನ್, 150 ಗ್ರಾಂನ ಒಂದು ಲಕ್ಷ್ಮಿ ಡಾಲರ್, ಎರಡು ಗಣಪತಿ ಡಾಲರ್, ಹಾರ್ಟ್ ರೂಪದ ಡಾಲರ್, ಮೂರು ಮಾಂಗಲ್ಯ ಸರ, 20 ಗ್ರಾಂನ ಎರಡು ಜತೆ ಹ್ಯಾಂಗಿಂಗ್ಸ್, ತಲಾ 10 ಗ್ರಾಂನ ನಾಲ್ಕು ಉಂಗುರ ಸೇರಿ 34 ತೊಲ ಚಿನ್ನಾಭರಣ ವಂಚಿಸಿದ್ದಾನೆ. ಮೋಸ ಹೋಗಿರುವುದು ಅರಿವಿಗೆ ಬಂದ ಬಳಿಕ ಮಹಿಳೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net