

ಮಳವಳ್ಳಿ: ನಮ್ಮ ನಾಡಿನ ಸಾಂಸ್ಕೃತಿಕ ಸೊಗಡನ್ನು ತಿಳಿಸಲು ಸೆ.13 ಮತ್ತು 14 ರಂದು ಗಗನಚುಕ್ಕಿ ಜಲಪಾತೋತ್ಸವ ಹಮ್ಮಿಕೊಳ್ಳಲಾಗಿದೆ. ಪೂರ್ವ ಸಿದ್ಧತೆಗಾಗಿ ತಾಲೂಕು ಮಟ್ಟದ ಅಧಿಕಾರಿಗಳ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.
ಜಲಪಾತೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಶಿವನಸಮುದ್ರದ ಗಗನಚುಕ್ಕಿ ಸಮೀಪದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿ ವರ್ಷ ಗಗನಚುಕ್ಕಿ ಜಲಪಾತದ ಪಕ್ಕದ ಆವರಣದಲ್ಲೇ ಜಲಪಾತೋತ್ಸವದ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಈ ಬಾರಿ ಶಿವನಸಮುದ್ರ ಬಳಿಯ ಮುಖ್ಯ ರಸ್ತೆಯಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಸಂಚಾರ ಬಂದ್ ಆಗಿದೆ. ಹಾಗಾಗಿ ವೇದಿಕೆ ಸಮಾರಂಭವನ್ನು ಮಲ್ಲಿಕ್ಯಾತನಹಳ್ಳಿ ಬಳಿಯ ಪ್ರವೇಶ ದ್ವಾರದಲ್ಲೇ ಆಯೋಜಿಸಲಾಗುವುದು ಎಂದರು.
ಜಲಪಾತ ವೀಕ್ಷಣೆಗೆ ವೇದಿಕೆ ಬಳಿಯಿಂದ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ತಾಲೂಕಿನ ಜನತೆಗೂ ಕಾರ್ಯಕ್ರಮ ಮತ್ತು ಜಲಪಾತೋತ್ಸವದ ಸೊಬಗನ್ನು ಕಣ್ತುಂಬಿಕೊಳ್ಳಲು ಉಚಿತ ಸಾರಿಗೆ ಜತೆಗೆ ಬೆಳಗಿನ ತಿಂಡಿ, ಮಧ್ಯಾಹ್ನ- ರಾತ್ರಿ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಎರಡು ದಿನಗಳ ಕಾಲ ವಿವಿಧ ಕಲಾ ತಂಡಗಳಿಂದ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ತಾಲೂಕಿನ ಆಯ್ದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವಕಾಶ ಕಲ್ಪಿಸಲಾಗುವುದು. ಜಲಪಾತದ ಆವರಣದಲ್ಲಿ ಲೈಟಿಂಗ್, ಲೇಸರ್ ಷೋ ಇರಲಿದೆ. ಯಾವುದೇ ಲೋಪವಾಗದಂತೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಕಾವೇರಿ ಕೊಳ್ಳದಲ್ಲಿ ಉತ್ತಮ ಮುಂಗಾರು ಪ್ರಾರಂಭವಾದ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷವೂ ಕೆಆರ್‌ಎಸ್ ಜಲಾಶಯ ಅವಧಿಗೂ ಮುನ್ನವೇ ಭರ್ತಿಯಾಗಿದೆ. ವರ್ಷಕ್ಕೊಮ್ಮೆ ಅದ್ಭುತವಾಗಿ ಕಾಣಸಿಗುವ ಜಲ ವೈಭವವನ್ನು ಪ್ರವಾಸಿಗರ ಮನತಣಿಸುವುದರ ಜತೆಗೆ ನಮ್ಮ ನಾಡಿನ ಸಾಂಸ್ಕೃತಿಕ ಸೊಗಡನ್ನು ತಿಳಿಸಲಾಗುವುದು. ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಕೃಷ್ಣಪ್ಪ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಲೋಕೇಶ್, ತಾಪಂ ಇಒ ಶ್ರೀನಿವಾಸ್, ಮುಖಂಡರಾದ ಆರ್.ಎನ್.ವಿಶ್ವಾಸ್, ಕೃಷ್ಣೇಗೌಡ, ಕಲುಣಿ ದೇವರಾಜು, ಚೌಡಯ್ಯ, ಮಾದೇಶ್, ಶಶಿರಾಜ್, ಸಂತೋಷ್, ವೇದಮೂರ್ತಿ, ಕೃಷ್ಣ ಉಪಸ್ಥಿತರಿದ್ದರು.