

ಚನ್ನರಾಯಪಟ್ಟಣ: ಪಟ್ಟಣದ ನವೋದಯ ಶಾಲಾ ಆವರಣದಲ್ಲಿ ಫೆ.12ರಂದು ಸಂಜೆ 5.30ಕ್ಕೆ ಹೇಮವಾಣಿ ಪ್ರಕಾಶನ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಾಂತಾರ ಶೈಲಿಯಂತಹ ಕಾರ್ಯಕ್ರಮ ಜರುಗಲಿದೆ ಎಂದು ಕತ್ತರಿಘಟ್ಟದ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಹೇಳಿದರು.
ಪಟ್ಟಣದ 40 ಅಡಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಾಂತಾರ ಶೈಲಿಯ ಕಾರ್ಯಕ್ರಮದ ರಥಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಇಡೀ ವಿಶ್ವವೇ ಕರ್ನಾಟಕದತ್ತ ನೋಡುವಂತೆ ಮಾಡಿದ ಕಾಂತಾರ ಚಿತ್ರ ನಮ್ಮ ಸಂಸ್ಕೃತಿ ಹಾಗೂ ದೈವಗಳ ಪರಂಪರೆಯನ್ನು ಸಾರುತ್ತದೆ. ತಾಲೂಕಿನಲ್ಲಿ ದೈವಗಳ ಅದ್ದೂರಿ ಯಕ್ಷಗಾನ ಕಲಾ ಪ್ರದರ್ಶನ ನಡೆಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ವಿಶೇಷ ಅದ್ದೂರಿ ಕಥಾನಕ ಪಂಜುರ್ಲಿ ಮತ್ತು ಗುಳಿಗ ದೈವಗಳ ಪ್ರವೇಶ ಇರುವ ಹಿರಿಯಡ್ಕ ಕ್ಷೇತ್ರ ಮಹಾತ್ಮೆ ಎಂಬ ಕನ್ನಡ ಯಕ್ಷಗಾನ ಕಲಾ ಪ್ರದರ್ಶನ ಕಾರ್ಯಕ್ರಮ ಜರುಗಲಿದ್ದು, ಸದ್ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಶ್ರದ್ಧಾಭಕ್ತಿಯಿಂದ ಕ್ರಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿ. ಮಹೇಶ್ ಮಾತನಾಡಿದರು. ಹಿರಿಯ ಪತ್ರಕರ್ತ ಪುಟ್ಟಣ್ಣ ಗೋಕಾಕ್, ತಾಲೂಕು ರೈತ ಸಂಘದ ಅಧ್ಯಕ್ಷರಾದ ಸಿ.ಜಿ. ರವಿ, ಮೀಸೆ ಮಂಜಣ್ಣ, ಕುಮಾರ್, ಶಂಕರಚಾರ್, ಭೂಮಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜ್, ಪ್ರಮುಖರಾದ ವಿನೋದ್ ಪೂಜಾರಿ, ಜಗದೀಶ್, ಧರಣೇಶ್, ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ರವಿ ಮಡಿವಾಳ್, ನಗರ ಉಪಾಧ್ಯಕ್ಷ ವಿಶ್ವಾಸ್‌ಗೌಡ ಇತರರು ಇದ್ದರು.