12ನೇ ಶತಮಾನದಲ್ಲಿಯೇ ಸಮಾನತೆ ಸಾರಿದ ಜಗದ್ಗುರು: ಚೆನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಬಣ್ಣನೆ

12_HSN_05
Published on

ಹಾಸನ: ಹನ್ನೇರನೆ ಶತಮಾನದಲ್ಲಿ ಜನಿಸಿ ವೀರಶೈವ ಧರ್ಮ ಪ್ರಚಾರದ ಜತೆಗೆ ಮಾನವರ ಕಲ್ಯಾಣಕ್ಕಾಗಿ ಸಮಾನತೆಯನ್ನು ಸಾರಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಯಸಳೂರು ತೆಂಕಲಗೂಡು ಬೃಹನ್ಮಠದ ಮಠಾಧೀಶರಾದ ಚೆನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶತಮಾನಗಳ ಹಿಂದೆಯೇ ಮನುಕುಲದ ಉದ್ಧಾರಕ್ಕೆ ಮಾನವರಲ್ಲಿ ಸಮಾನತೆ ಸಾರಿದ ಹರಿಕಾರರಾಗಿ ಬಂದವರು ಜಗದ್ಗುರು ರೇಣುಕಾಚಾರ್ಯರು ಸಾರ್ಥಕ ಜೀವನ, ವೈಭವೀಕರಣ ಇಲ್ಲದಂತೆ ಬೇರೆ ಧರ್ಮದ ಬಗ್ಗೆ ಅಪಪ್ರಚಾರ ಮಾಡದೆ ತಮ್ಮ ಧರ್ಮವನ್ನು ಸಾರಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಶತಮಾನಗಳ ಹಿಂದೆಯೇ ಹೆಣ್ಣು-ಗಂಡು ಸಮಾನರು ಎಂದು ಸಮಾಜಕ್ಕೆ ಸಾರಿದರು. ಅಂದೆ ಸಮಾನತೆಯನ್ನು ತಂದು ಮಹಿಳೆಯರು ಸಹ ಲಿಂಗ ದೀಕ್ಷೆಗೆ ಅರ್ಹರು ಎಂದು ಸಾರಿದರು. ಯಾರು ಸ್ವಾರ್ಥಕ್ಕೆ ಜೀವನವನ್ನು ಮುಡಿಪಾಗಿಡದೆ ಸಮಾಜದ ಉದ್ಧಾರಕ್ಕೆ ಮೀಸಲಿಡುತ್ತಾರೋ ಅವರ ಜನ್ಮದಿನವನ್ನು ಜಯಂತ್ಯುತ್ಸವಾಗಿ ಆಚರಿಸುತ್ತೇನೆ. ರೇಣುಕಾಚಾರ್ಯರು ವೀರಶೈವ ಧರ್ಮದ ರಕ್ಷಣೆ ಹಾಗೂ ಧರ್ಮದ ಉದ್ಧಾರಕ್ಕೆ ಶ್ರಮಿಸಿದವರು ಎಂದು ಸ್ಮರಿಸಿದರು.

ಇಂದು ಉತ್ತಮ ಜೀವನಕ್ಕೆ ಮನೋರಂಜನೆ ಬೇಕೆ ಹೊರತು ಮನೋರಂಜನೆಯ ಜೀವನವಾಗಬಾರದು. ಮಹನೀಯರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರಸಾದ ಸವಿದು ಹೋದರೆ ಸಾಲದು. ಅವರ ಚಿಂತನೆ,ಧರ್ಮ ರಕ್ಷಣೆಯ ಗುಣವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ತಣ್ಣೀರು ಹಳ್ಳ ಮಠದ ಮಠಾಧೀಶರಾದ ವಿಜಯ್ ಕುಮಾರ್ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಧರ್ಮ ರಕ್ಷಣೆಗೆ ಶ್ರಮಿಸಿದರು. ವೀರಶೈವ ಧರ್ಮವನ್ನು ಭಿತ್ತಿ ಬದುಕನ್ನು ಬಂಗಾರ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜಾತಿ, ಧರ್ಮಗಳ ಧಾರ್ಮಿಕ ಕೇಂದ್ರವನ್ನು ಸ್ಥಾಪಿಸಿ ಮಹಿಳೆಯರಿಗೂ ಸ್ಥಾನಮಾನವನ್ನು ನೀಡಿದಂತಹ ಲೋಕಕಲ್ಯಾಣಕ್ಕೆ ವಿಶ್ವ ಶಾಂತಿಗೆ ಸಮಾನತೆಯ ಶಕ್ತಿಯನ್ನು ತುಂಬಿದಂತಹ ಮಹಾನ್ ಚೇತನ ಜಗದ್ಗುರು ರೇಣುಕಾಚಾರ್ಯರು ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಪರಮೇಶ್ ಮಾತನಾಡಿ, ಧರ್ಮದಿಂದ ವಿಶ್ವಕ್ಕೆ ಶಾಂತಿ, ಮಾನವ ಕುಲಕ್ಕೆ ಧರ್ಮದ ಚಿಂತನೆಗಳನ್ನು ಸಾರಿದ ರೇಣುಕಾಚಾರ್ಯರು ಪಂಚಪೀಠಗಳ ಮೂಲಕ ಜಗತ್ತಿಗೆ ಶಾಂತಿ ಧರ್ಮದ ಸಂದೇಶವನ್ನು ಬಿತ್ತಿದರು ಎಂದು ಹೇಳಿದರು.

ಎಲ್ಲ ಮಠಾಧೀಶರ ಬೋಧನೆಗಳನ್ನು ಎಲ್ಲರೂ ಪಾಲಿಸಬೇಕು. ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಎಲ್ಲರ ಜೀವನ, ಸಮಾಜ, ದೇಶ ಧರ್ಮದ ಹಾದಿಯಲ್ಲಿ ಮುನ್ನಡೆಯಲಿದೆ. ರೇಣುಕಾಚಾರ್ಯರು ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿರುವ ಮಠಗಳು ಲಾಭದ ಹಾದಿಯನ್ನು ಹಿಡಿಯದೆ ಕೇವಲ ಧಮ ಸರ್ಭೆ, ಧರ್ಮ ಪ್ರಚಾರದಂತಹ ಭಕ್ತಿಯ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದು ಸ್ಮರಿಸಿದರು.

ಮುಂದಿನ ವರ್ಷ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಮತ್ತಷ್ಟು ಅದ್ದೂರಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಕಾರ್ಯಕ್ರಮ ಆಯೋಜಿಸುವ ಹತ್ತು ಹದಿನೈದು ದಿನಗಳ ಮುಂಚಿತವಾಗಿ ಮಾಹಿತಿ ಒದಗಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ತಾರಾನಾಥ್ ಅವರಿಗೆ ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶ್ರೀ ರೇಣುಕಾಚಾರ್ಯ ಅವರ ಭಾವಚಿತ್ರಕ್ಕೆ ಗಣ್ಯರ ಪುಷ್ಪಾರ್ಚನೆಯೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಂತರ ಎನ್.ಆರ್. ವೃತ್ತ ಮಾರ್ಗವಾಗಿ ಮಹಾವೀರ ವೃತ್ತ, ಹಾಸನಾಂಬ ಕಲಾಕ್ಷೇತ್ರದವರೆಗೆ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ದೇವರಾಜ ಶಾಸ್ತ್ರಿ ಉಪನ್ಯಾಸ ನೀಡಿದರು. ಡಿವೈಎಸ್ಪಿ ಮುರಳಿಧರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಡಾ. ತಾರಾನಾಥ್, ತಹಸೀಲ್ದಾರ್ ಉಲಿವಾಲ ಮೋಹನ್ ಕುಮಾರ್, ಎಸ್.ರಮೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಉಪಾಧ್ಯಕ್ಷ ಪುನೀತ್ ಪಟೇಲ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಈ. ಕೃಷ್ಣೇಗೌಡ, ವೀರಶೈವ ಲಿಂಗಾಯತ ಜಿಲ್ಲಾ ಘಟಕದ ಕಾರ್ಯದರ್ಶಿ ಭುವನಾಕ್ಷಿ, ಸೇರಿದಂತೆ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net