

ಕೊಳ್ಳೇಗಾಲ: ತಾಲೂಕಿನ ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಾರ್ಮಿಕರು ವೇತನ ಪರಿಷ್ಕರಣೆಗೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟ 11 ದಿನ ಪೂರೈಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಆಲ್ ಇಂಡಿಯಾ ಯೂನೆಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ರಾಜ್ಯ ಉಪಾಧ್ಯಕ್ಷ ಕೆ.ಬಿ.ಭಟ್ ಮಾತನಾಡಿ, ಕರ್ನಾಟಕ ವೇತನ ಮಂಡಳಿಯನ್ನು ಜಾರಿ ಮಾಡುವಂತೆ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಾರ್ಮಿಕರು ಕಳೆದ 11 ದಿನದಿಂದ ಹೋರಾಟ ನಡೆಸುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳ ಹಿಂದೆಯೇ ಈ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನಲೆ ಪ್ರತಿಭಟಿಸಲಾಗುತ್ತಿದೆ ಎಂದರು.
3 ದಿನಗಳಿಂದ ಕಾರ್ಖಾನೆ ಬಂದ್ ಮಾಡುವ ಮೂಲಕ ಕಾರ್ಮಿಕರು ಕಬ್ಬನ್ನು ಅರೆಯದೆ ಕಾರ್ಖಾನೆ ದ್ವಾರದ ಮುಂಭಾಗ ಪ್ರತಿಭಟಿಸುತ್ತಿದ್ದಾರೆ. ಇಷ್ಟಾದರೂ ಸೌಜನ್ಯಕ್ಕಾದರೂ ಕಾರ್ಖಾನೆಯಿಂದ ಯಾರು ಸಹ ಬಂದಿಲ್ಲ. ರಾಜ್ಯದ 80 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಲ್ಲಿ ಈಗಾಗಲೇ ವೇತನ ಪರಿಷ್ಕರಣೆ ಆಗಿದೆ. ಆದರೆ, ಈ ಕಾರ್ಖಾನೆಯಲ್ಲಿ ಮಾಡಲಾಗಿಲ್ಲ. ಕೆಲವರು ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು ತಡೆಯಾಜ್ಞೆ ಆದೇಶಿಸಿದೆ. ಅದಕ್ಕಾಗಿ ಆಡಳಿತ ಮಂಡಳಿಯಾದರೂ ಸೌಜನ್ಯಕ್ಕಾದರೂ ಕಾರ್ಮಿಕರ ಭೇಟಿ ಮಾಡಿ ಬೇಡಿಕೆಯನ್ನು ಕೇಳಬೇಕಾಗಿತ್ತು. ಆದರೆ, ಕಾರ್ಮಿಕರ ಜತೆ ಚರ್ಚಿಸುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆ ಕರ್ನಾಟಕದಲ್ಲಿದ್ದರೂ ತಮಿಳುನಾಡಿನ ವೇತನ ಮಂಡಳಿ ವೇತನ ನೀಡುತ್ತೇವೆ ಎಂಬುದು ಕಾರ್ಖಾನೆ ವಾದವಾಗಿದೆ. ಕಾರ್ಮಿಕರು ಹೋರಾಟ ನಡೆಸುತ್ತಿರುವುದಕ್ಕೆ ಬಳ್ಳಾರಿಯಿಂದ ಕಾರ್ಮಿಕರನ್ನು ಕರೆತಂದು ಕಬ್ಬು ಕಟಾವು ಮಾಡಿಸಿ ತಮಿಳುನಾಡಿಗೆ ರವಾನಿಸುತ್ತಿದ್ದಾರೆ. 18 ವರ್ಷ ಸೇವೆ ಸಲ್ಲಿಸಿರುವ ಕಾರ್ಮಿಕ ಕೇವಲ 16 ಸಾವಿರ ರೂ. ವೇತನ ಪಡೆಯುತ್ತಿದ್ದಾನೆ. ಗೌರವಯುತ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಕಾರ್ಮಿಕರಾದ ಮಹದೇವಸ್ವಾಮಿ, ನಟರಾಜು, ರಘು, ಮೋಹನ್, ಹರೀಶ್, ನಾರಾಯಣಸ್ವಾಮಿ, ಮಹೇಶ್, ಗಿರೀಶ್, ಪರಮೇಶ್ ಮತ್ತಿತರಿದ್ದರು.