

ಮಂಡ್ಯ: ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಕಳೆದ ಬಾರಿಗಿಂತ ಒಂಬತ್ತು ಸ್ಥಾನ ಏರಿಕೆಯೊಂದಿಗೆ 12ನೇ ಸ್ಥಾನ ಪಡೆದುಕೊಂಡಿದೆ. ಆದರೆ ಶೇಕಡಾವಾರು ಅಂಕಿ ಅಂಶದಲ್ಲಿ ಕುಸಿತ ಕಂಡಿದೆ. ಅಂತೆಯೇ ಈ ಬಾರಿಯೂ ಟಾಪರ್ ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಈ ನಡುವೆ ಕೆ.ಆರ್.ಪೇಟೆ ತಾಲೂಕಿನ ವಿದ್ಯಾರ್ಥಿನಿ ಜೆ.ಧ್ರುತಿ 625 ಅಂಕದೊಂದಿಗೆ ರಾಜ್ಯಕ್ಕೆ ಟಾಪರ್ ಆಗಿರುವುದು ಹೆಮ್ಮೆಯ ಸಂಗತಿ.
2023ರಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿದ್ದ ಮಂಡ್ಯ, ಕಳೆದ ಸಾಲಿನಲ್ಲಿ ಶೇ.74.54 ಫಲಿತಾಂಶದೊಂದಿಗೆ 19ನೇ ಸ್ಥಾನಕ್ಕೆ ಕುಸಿದಿತ್ತು. ಈ ಬಾರಿ ಶೇ.69.27 ಫಲಿತಾಂಶದೊಂದಿಗೆ 12ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ ನೀಡಿದ ಪರಿಣಾಮ ಒಟ್ಟಾರೆ ಫಲಿತಾಂಶದಲ್ಲಿ ಬದಲಾವಣೆಯಾಗಿದೆ. ಇನ್ನು ಜಿಲ್ಲೆಯಲ್ಲಿ 19,453 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 13,476 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಮಂಡ್ಯ ದಕ್ಷಿಣ ಫಸ್ಟ್, ಕೆ.ಆರ್.ಪೇಟೆ ಲಾಸ್ಟ್: ತಾಲೂಕುವಾರು ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಫಲಿತಾಂಶ ನೋಡುವುದಾದರೆ ಮಂಡ್ಯ ದಕ್ಷಿಣ ವಲಯ ಮೊದಲ ಸ್ಥಾನ ಅಲಂಕರಿಸಿದೆ. ಈ ಬ್ಲಾಕ್‌ನಲ್ಲಿ 3,109 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,480 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಂಡ್ಯ ಉತ್ತರ ವಲಯದಲ್ಲಿ 1,196 ವಿದ್ಯಾರ್ಥಿಗಳ ಪೈಕಿ 948, ನಾಗಮಂಗಲದಲ್ಲಿ 2,222 ವಿದ್ಯಾರ್ಥಿಗಳ ಪೈಕಿ 1,538, ಮಳವಳ್ಳಿಯಲ್ಲಿ 3,126 ವಿದ್ಯಾರ್ಥಿಗಳಲ್ಲಿ 2,144, ಶ್ರೀರಂಗಪಟ್ಟಣದಲ್ಲಿ 1,933 ವಿದ್ಯಾರ್ಥಿಗಳ ಪೈಕಿ 1,269, ಮದ್ದೂರಿನಲ್ಲಿ 3,429 ವಿದ್ಯಾರ್ಥಿಗಳಲ್ಲಿ 2,251, ಪಾಂಡವಪುರದಲ್ಲಿ 1,999 ವಿದ್ಯಾರ್ಥಿಗಳಲ್ಲಿ 1,297 ಹಾಗೂ ಕೆ.ಆರ್.ಪೇಟೆ ತಾಲೂಕಿನಲ್ಲಿ 2,544 ವಿದ್ಯಾರ್ಥಿಗಳ ಪೈಕಿ 1,549 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.