

ಮೈಸೂರು: ಜಗಜ್ಯೋತಿ ಬಸವಣ್ಣ 12ನೇ ಶತಮಾನದಲ್ಲಿ ಮಾಡಿದ ಸಾಮಾಜಿಕ ಪರಿವರ್ತನೆಯ ಕ್ರಾಂತಿಯು ಫ್ರಾನ್ಸ್‌ನಲ್ಲಿ ಲೆನಿನ್ ಮಾಡಿದ ಫ್ರೆಂಚ್ ಕ್ರಾಂತಿಗಿಂತಲೂ ದೊಡ್ಡದು ಎಂದು ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ, ಕನ್ನಡ ಸಾಹಿತ್ಯ ಕಲಾಕೂಟ ವತಿಯಿಂದ ನಗರದ ಶ್ರೀ ಬಸವೇಶ್ವರ ಪ್ರತಿಮೆ ಬಳಿ ಶುಕ್ರವಾರ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಬಸವ ಸಾಂಸ್ಕೃತಿಕ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತ ನಾಡಿ, ಬಸವಣ್ಣ ಅವರು ವರ್ಣ, ವರ್ಗ ಭೇದ ನಿವಾರಿಸಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಹಿಂದಿನ ರಾಜ್ಯ ಸರ್ಕಾರ ಹೆದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು, ಈಗಿನ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಸ್ವಾಗತಾರ್ಹ ಎಂದರು.
ಬಸವಣ್ಣ ಕಾಯಕವೇ ಕೈಲಾಸ ಎಂದರು. ಇಂದು ಪೌರ ಕಾರ್ಮಿಕ ಮಹಿಳೆಯನ್ನು ಗೌರವಿಸಿರುವುದು ಉತ್ತಮ ಕಾರ್ಯ. ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯಗಳು ಎಲ್ಲರಿಗೂ ತಲುಪಬೇಕು. ಇದರಿಂದ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಪೌರ ಕಾರ್ಮಿಕರಾದ ಸುಶೀಲಾ ಅವರಿಗೆ ಬಸವ ಸಾಂಸ್ಕೃತಿಕ ಪುರಸ್ಕಾರ ಪ್ರದಾನ ಮಾಡಲಾಯಿತು. ಶ್ರೀ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮೆಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ. ನಾಗೇಶ್, ಆಶಾದಾಯಕ ಸೇವಾ ಟ್ರಸ್ಟ್ ಸಂಸ್ಥಾಪಕ ಸಾ.ಕ. ಸುರೇಶ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಜಿಲ್ಲಾ ವೀರಶೆವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಸ್. ಶಿವಮೂರ್ತಿ ಕಾನ್ಯ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ರಂಗಕರ್ಮಿ ರಾಜಶೇಖರ ಕದಂಬ, ಕಲಾವಿದ ಎಲ್. ಶಿವಲಿಂಗಪ್ಪ ಹಾಗೂ ಇತರರು ಇದ್ದರು.