

ಭದ್ರಾವತಿ: ಅನ್ಯ ರಾಜ್ಯ, ಜಿಲ್ಲೆಯಿಂದ ಬಂದಿರುವವರು ಹಾಗೂ ಕರೊನಾ ಲಕ್ಷಣ ಹೊಂದಿರುವವರ ಹಾಗೂ ರೋಗಿಯ ಸಂಪರ್ಕಕ್ಕೆ ಬಂದಿರುವ ತಾಲೂಕಿನ 1,299 ಜನರ ಗಂಟಲು ದ್ರವ ಹಾಗೂ ರಕ್ತ ಮಾದರಿ ಪಡೆಯಲಾಗಿದ್ದು ಅದರಲ್ಲಿ ಎರಡು ಪ್ರಕರಣ ಮಾತ್ರ ಪಾಸಿಟಿವ್ ಬಂದಿದೆ.
ಜೂ.15ರವರೆಗೆ 2 ಪ್ರಕರಣ ಮಾತ್ರ ಪಾಸಿಟಿವ್ ಬಂದಿದ್ದು 1,286 ಮಾದರಿ ನೆಗೆಟಿವ್ ಬಂದಿವೆ. ಉಳಿದಂತೆ 11 ಪ್ರಕರಣಗಳ ವರದಿ ಬರಬೇಕಿದೆ.
ತಾಲೂಕಿನ ಎಲ್ಲೆಡೆ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖಾ ಅಧಿಕಾರಿ, ಸಿಬ್ಬಂದಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ಹಾಕುತ್ತಿದ್ದು ನಗರಸಭೆ ಸಹಯೋಗದೊಂದಿಗೆ ಎಲ್ಲೆಡೆ ಸ್ಯಾನಿಟೈಸ್ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ರಂಗಪ್ಪವೃತ್ತದಿಂದ ಹೊಳೆಹೊನ್ನೂರು ವೃತ್ತದವರೆಗೂ ಮಾಡಲಾದ ಸೀಲ್ಡೌನ್ ಪ್ರದೇಶದಲ್ಲಿ ಯಾರೂ ಪ್ರವೇಶ ಮಾಡದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಿದೆ. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ತಾಲೂಕಿಗೆ ಆಗಮಿಸಿರುವ ಜನರನ್ನು ಹೋಮ್ ಕ್ವಾರಂಟೈನ್ ಮಾಡುವಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಹೆಚ್ಚಿನ ಶ್ರಮ ಹಾಕಿದ್ದಾರೆ.