1,292 ದ್ವಿಚಕ್ರ ವಾಹನಗಳು ಜಪ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಮಾಹಿತಿ

28 Nela ph 02 press Meet
Published on

ನೆಲಮಂಗಲ: ಉಪವಿಭಾಗ ವ್ಯಾಪ್ತಿಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ 1,292 ಬೈಕುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಮಾಲೀಕರಿಗೆ ತಲಾ 500 ರೂ. ದಂಡ ವಿಧಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ತಿಳಿಸಿದರು.

ಅನಗತ್ಯವಾಗಿ ಸಂಚರಿಸುತ್ತಿದ್ದ ಸವಾರರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದು, ಸ್ಪಂದಿಸದ ಕಾರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಈಗ ದಂಡ ಕಟ್ಟಿಸಿಕೊಂಡು ವಾಹನ ಹಿಂತಿರುಗಿಸಲಾಗುತ್ತಿದೆ ಎಂದು ಪಟ್ಟಣದ ಠಾಣೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಜಿಲ್ಲೆಯಾದ್ಯಂತ ಕ್ವಾರಂಟೈನ್ ಉಲ್ಲಂಘನೆಯಡಿ 14 ಪ್ರಕರಣ ದಾಖಲಿಸಲಾಗಿದ್ದು, ವಿನಾಕಾರಣ ಓಡಾಡುವುದನ್ನು ಸಾರ್ವಜನಿಕರು ಕಡಿಮೆ ಮಾಡಬೇಕು.ವಶಕ್ಕೆ ಪಡೆದಿರುವ ವಾಹನಗಳ ಮಾಲೀಕರ ಪರಿಶೀಲನೆ ನಡೆಸುತ್ತಿದ್ದು, ಸಕಾರಣ ನೀಡಿದಲ್ಲಿ ದಂಡ ಹಾಕುವುದಿಲ್ಲ ಎಂದರು.

ನಗರಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 362, ಸಂಚಾರಿ ಪೊಲೀಸ್ ಠಾಣೆ 462, ಗ್ರಾಮಾಂತರದಲ್ಲಿ 84, ತ್ಯಾಮಗೊಂಡ್ಲುವಿನಲ್ಲಿ 54, ಮಾದನಾಯಕನಹಳ್ಳಿಯಲ್ಲಿ 170, ದಾಬಸ್‌ಪೇಟೆ ವ್ಯಾಪ್ತಿಯಲ್ಲಿ 160 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

ನೆಲಮಂಗಲ ಉಪವಿಭಾಗ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಯಶಸ್ವಿಯಾಗಿದೆ. ಗ್ರಾಮೀಣಭಾಗದ ಜನ ಸ್ವಯಂ ಪ್ರೇರಿತರಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಲಾಕ್‌ಡೌನ್ ಯಶಸ್ವಿಗೊಳಿಸಿದ್ದಾರೆ ಎಂದರು.

ಕರುಣೆಯ ಗೋಡೆ ಭೆೇಟಿ: ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದ ಬಳಿ ನಿರಾಶ್ರಿತರಿಗಾಗಿ ನಿರ್ಮಾಣಗೊಂಡಿದ್ದ ಕರುಣೆಯ ಗೋಡೆ ಸ್ಥಳದಲ್ಲಿ ಇತ್ತೀಚೆಗೆ ಯಾರೂ ಆಹಾರ ಪದಾರ್ಥ ಇರಿಸದಿರುವ ಮಾಹಿತಿ ಪಡೆದುಕೊಂಡ ರವಿ ಡಿ.ಚನ್ನಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಲ್ಲರೂ ಸೇರಿಕೊಂಡು ಕರುಣೆಯ ಗೋಡೆಯ ನಿರ್ವಹಣೆ ಮಾಡುವಂತೆ ತಿಳಿಸಿದರು.

ಡಿವೈಎಸ್‌ಪಿ ಬಿ.ಎಸ್.ಮೋಹನ್‌ಕುಮಾರ್, ವೃತ್ತನಿರೀಕ್ಷಕ ಶಿವಣ್ಣ, ಸಂಚಾರಿಠಾಣೆ ಇನ್‌ಸ್ಪೆಕ್ಟರ್ ಎಸ್.ಆರ್.ವೀರೇಂದ್ರಪ್ರಸಾದ್, ಎಸ್‌ಐ ಮೋಹನ್‌ಕುಮಾರ್, ಡಿ.ಆರ್.ಮಂಜುನಾಥ್, ವಿ.ಅಂಜನಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net