ಕಾವೇರಿ ಹೋರಾಟಗಾರರಿಂದ ಭಿತ್ತಿಪತ್ರ ಚಳವಳಿ: ರಾಜ್ಯಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ

128th day Cauvery protest mandya
Published on

ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡುತ್ತಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರ ಮತ್ತು ರೈತರ ಹಿತ ಕಡೆಗಣಿಸಿರುವ ರಾಜ್ಯಸರ್ಕಾರದ ವಿರುದ್ಧ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 128ನೇ ದಿನದ ಅಂಗವಾಗಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಭಿತ್ತಿಪತ್ರ ಚಳವಳಿ ನಡೆಸಿತು.

‘ಕಾವೇರಿ ನದಿ ನೀರು ನಮ್ಮ ಹಕ್ಕು, ಕಾವೇರಿ ನಮ್ಮದು ರಕ್ಷಿಸೋಣ ಬನ್ನಿ’ ಘೋಷ ವಾಕ್ಯದ ಭಿತ್ತಿ ಪತ್ರ ಪ್ರದರ್ಶಿಸಿ ಮೆರವಣಿಗೆ ಹೊರಟು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಬಸ್‌ಗಳ ಮೇಲೆ ಅಂಟಿಸಿದರು. ಅಂತೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಖಾಸಗಿ ಬಸ್, ವಾಹನಗಳು ಹಾಗೂ ಗೋಡೆಗಳ ಮೇಲೆ ಆಂಟಿಸಿ ಕಾವೇರಿ ವಿಚಾರದಲ್ಲಿ ನ್ಯಾಯಕ್ಕೆ ಆಗ್ರಹಿಸಿದರು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ, ಸಂಕಷ್ಟಕಾಲದಲ್ಲಿ ನೀರು ಬಿಡುವ ಆದೇಶ ಮಾಡುತ್ತಿರುವ ಪ್ರಾಧಿಕಾರದ ವಿರುದ್ಧ ಹೋರಾಟ ಮಾಡುತ್ತಾ ಕಾವೇರಿ ನೀರನ್ನು ಉಳಿಸಲು ಒತ್ತಡ ಹಾಕುತ್ತಿದ್ದೇವೆ. ಚಳವಳಿ ಬೇಕಿತ್ತಾ ಎಂದು ಕುಹಕದ ಮಾತನ್ನು ಆಡುವವರು ಧರಣಿ ಸ್ಥಳಕ್ಕೆ ಬಂದಿದ್ದಾರಾ?. ಸರ್ಕಾರವನ್ನು ರಾಜಕಾರಣಿಗಳನ್ನು ಪ್ರಶ್ನಿಸಿದ್ದಾರಾ?. ಎಲ್ಲಿ ಸಿಗುತ್ತಾರೋ ಅಲ್ಲೇ ಪ್ರಶ್ನೆ ಮಾಡಬಹುದಿತ್ತಲ್ಲ?. ರಾಜಕಾರಣಿಗಳನ್ನು ಸನ್ಮಾನಿಸಿ ಗೌರವಿಸುವವರು ಇಲ್ಲಿ ಚಳವಳಿ ಬಗ್ಗೆ ಕುಹಕದ ಮಾತು ಆಡುತ್ತಾರೆ. ಇವರಿಗೆ ನೈತಿಕತೆ ಇದೆಯಾ ಎಂದು ಕಿಡಿಕಾರಿದರು.

ಯಾರನ್ನು ಮೆಚ್ಚಿಸಲು ಅಥವಾ ಯಾರಿಗೂ ಹೆದರಿ ಚಳವಳಿ ಮಾಡುತ್ತಿಲ್ಲ. ಕಾವೇರಿ ನದಿ ನೀರು ನಮ್ಮದು, ರೈತರ ಹಿತರಕ್ಷಣೆ ಮುಖ್ಯ. ಹಾಗಾಗಿ ನಿರಂತರ ಹೋರಾಟ ನಡೆಯುತ್ತಿದೆ. ಯಾರನ್ನು ಕೇಳಿ ಚಳವಳಿ ಮಾಡಬೇಕಾಗಿಲ್ಲ, ನಿಲ್ಲಿಸಬೇಕಾಗಿಲ್ಲ. ಹೋರಾಟಕ್ಕೆ ಬರಲಿ, ಇಲ್ಲದಿದ್ದರೆ ಸುಮ್ಮನಿರಲಿ. ಹೋರಾಟ ಮಾಡೋದು ಬಿಡೋದು ನಮಗೆ ಸೇರಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರೈತರ ಹಿತ ಕಾಯುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಬೆಳೆದು ನಿಂತಿದ್ದ ಬೆಳೆಗೆ ನೀರು ಕೊಟ್ಟರಾ?. ಕುಡಿಯುವ ನೀರು ಉಳಿಸಿದ್ದಾರಾ?. ಜಲಾಶಯದಲ್ಲಿ ನೀರಿಲ್ಲ ಹೊಸ ಬೆಳೆ ಹಾಕಬೇಡಿ ಎಂದಿದ್ದಾರೆ. ಇದು ರೈತರ ಹಿತ ಕಾಪಾಡುವ ಜವಾಬ್ದಾರಿಯೇ?. ತಮಿಳುನಾಡಿಗೆ ನೀರು ಬಿಟ್ಟಿಲ್ಲ ಎಂದು ಬೊಗಳೆ ಬಿಡುತ್ತಾರೆ. ಜಿಲ್ಲಾಧಿಕಾರಿ ಮತ್ತು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ನೀರು ಬಿಟ್ಟಿಲ್ಲ ಎಂದು ಹೇಳಲಿ ನೋಡೋಣ. ಆಳುವ ಸರ್ಕಾರದ ಬೂಟಾಟಿಕೆ ಬಯಲಾಗಿದೆ. ಯಾವ ಸಚಿವರು, ಶಾಸಕರು, ಸಂಸದರು ರೈತರ ಹಿತ ಕಾಯುತ್ತಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ, ದಸಂಸ ಎಂ.ವಿ.ಕೃಷ್ಣ, ಜೈ ಕರ್ನಾಟಕ ಪರಿಷತ್‌ನ ಎಸ್.ನಾರಾಯಣ್, ಸುಜಾತಾ ಕೃಷ್ಣ, ಸುಶೀಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net