

ತುಮಕೂರು: ಜಿಲ್ಲೆಯಲ್ಲಿ ಬುಧವಾರ ಕೂಡ ಕರೊನಾ ಸೋಂಕಿತರ ಸಂಖ್ಯೆ ಶತಕ ದಾಟಿದ್ದು 128 ಜನರಿಗೆ ಸೋಂಕು ತಗುಲಿದೆ. ಅಗ್ರಸ್ಥಾನ ತುಮಕೂರು ಬದಲಾಗಿ ಕುಣಿಗಲ್ ಪಾಲಾಗಿದೆ.
ಬುಧವಾರ 90 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು ತುಮಕೂರು ತಾಲೂಕಿನ 48, ಚಿಕ್ಕನಾಯಕನಹಳ್ಳಿ ತಾಲೂಕಿನ 17 ಜನರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2209ಕ್ಕೇರಿದ್ದು ಗುಣಮುಖರಾದವರು 1200, ಸಕ್ರಿಯ ಪ್ರಕರಣ 944.
ಕುಣಿಗಲ್ ತಾಲೂಕಿನ 28 ಜನರಲ್ಲಿ ಸೋಂಕು ಕಾಣಿಸಿದ್ದು ತುಮಕೂರು 27, ಕೊರಟಗೆರೆ 25, ಶಿರಾ 21, ಮಧುಗಿರಿ 9, ಚಿಕ್ಕನಾಯಕನಹಳ್ಳಿ 7, ಗುಬ್ಬಿ 6, ತುರುವೇಕೆರೆ, ಪಾವಗಡ ತಲಾ 2 ಹಾಗೂ ತಿಪಟೂರು ತಾಲೂಕಿನಲ್ಲಿ ಒಬ್ಬರಿಗೆ ಸೋಂಕು ದೃಢವಾಗಿದೆ.
ಜುಲೈ 26ರಂದು ಆಸ್ಪತ್ರೆಗೆ ದಾಖಲಾಗಿದ್ದ ತುಮಕೂರು ದಾನನಗರದ 45 ವರ್ಷದ ಮಹಿಳೆ ಹಾಗೂ ಆ.1ರಂದು ಆಸ್ಪತ್ರೆಗೆ ದಾಖಲಾಗಿದ್ದ ಪಿ.ಎಚ್.ಕಾಲನಿಯ 65 ವರ್ಷದ ವ್ಯಕ್ತಿ ಮಹಾಮಾರಿ ಕರೊನಾಗೆ ಬಲಿಯಾಗಿದ್ದು ಒಟ್ಟು ಸಾವಿನ ಸಂಖ್ಯೆ 65. ಬುಧವಾರದ ಪ್ರಕರಣದಲ್ಲಿ 4 ಗರ್ಭಿಣಿಯರಿಗೆ ಸೋಂಕು ತಗುಲಿದ್ದು, ಶಿರಾ 2 ಹಾಗೂ ಗುಬ್ಬಿ, ಮಧುಗಿರಿಯಲ್ಲಿ ತಲಾ ಒಬ್ಬರಿಗೆ ದೃಢಪಟ್ಟಿದೆ. ಮಧುಗಿರಿಯ ಒಬ್ಬ ಪೊಲೀಸ್‌ಗೂ ಸೋಂಕು ವಕ್ಕರಿಸಿದೆ.
ಸೋಂಕಿತರ ಪೈಕಿ 88 ಜನರಿಗೆ ಯಾವುದೇ ರೋಗಲಕ್ಷಣಗಳಿಲ್ಲದಿರುವುದು ನೆಮ್ಮದಿ ಮೂಡಿಸಿದ್ದರೂ ರೋಗ ಸಮುದಾಯದಲ್ಲಿ ಶೀಘ್ರವಾಗಿ ಹರಡುವ ಅಪಾಯವಿದೆ, 40 ಜನರಿಗೆ ರೋಗ ಲಕ್ಷಣಗಳಿದ್ದು ಚಿಕಿತ್ಸೆ ನೀಡಲಾಗುತ್ತಿದೆ. 69 ಪುರುಷ, 59 ಮಹಿಳೆಯರಿಗೆ ಸೋಂಕು ತಗುಲಿದ್ದು 60 ವರ್ಷ ಮೇಲ್ಪಟ್ಟ 20 ಜನರು 5 ವರ್ಷದೊಳಗಿನ ಇಬ್ಬರಿಗೆ ಸೋಂಕಿದೆ. ರೋಗ ಲಕ್ಷಣಗಳಿರುವ ಸೋಂಕಿತರಿಗೆ ಕೋವಿಡ್ ಆಸ್ಪತ್ರೆ ಹಾಗೂ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 7 ಕರೊನಾ ಸೋಂಕಿತರ ಆರೋಗ್ಯ ಸ್ಥಿತಿ ಮೇಲೆ ಸದಾ ನಿಗಾವಹಿಸಿರುವ ವೈದ್ಯರು ಸಾಧ್ಯವಾದಷ್ಟು ಮಟ್ಟಿಗೆ ಸಾವಿನ ಸಂಖ್ಯೆ ಕಡಿಮೆಗೊಳಿಸಲು ಪ್ರಯತ್ನ ಮುಂದುವರಿಸಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಶೀತ ಸಂಬಂಧಿ ಸಮಸ್ಯೆಗಳು ಜಾಸ್ತಿಯಾಗುವ ಸಾಧ್ಯತೆಯಿದ್ದು ಜನರು ಎಚ್ಚರಿಕೆಯಿಂದ ಇರಬೇಕಿದೆ. ಆರೋಗ್ಯ ಸಮಸ್ಯೆಗಳು ಕಾಣಿಸಿದ ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಾಗುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.