ಆಲಿಕಲ್ಲು ಮಳೆಗೆ 8.1 ಹೆಕ್ಟೇರ್​ ಬೆಳೆಹಾನಿ : ಬೂದಿಕೋಟೆ ವ್ಯಾಪ್ತಿಯ ರೈತರ ಬದುಕು ಬೀದಿಗೆ, ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯ

22
Published on

ಬೂದಿಕೋಟೆ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಗುಡುಗು ಸಿಡಿಲು ಸಹಿತ ಬಿರುಗಾಳಿ ಆಲಿಕಲ್ಲು ಮಳೆಗೆ ರೈತರು ಬೆಳೆದಿದ್ದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಬಂಗಾರಪೇಟೆ ತಾಲೂಕಿನಲ್ಲಿ ಭಾನುವಾರ ಸುರಿದ ಆಲಿಕಲ್ಲು ಮಳೆಗೆ ಬೂದಿಕೋಟೆ ಹೋಬಳಿಯ ಎಳೆಸಂದ್ರ ಗ್ರಾಪಂ ವ್ಯಾಪ್ತಿಯ ನಲ್ಲಗುಟ್ಲಹಳ್ಳಿ ಮತ್ತು ಹುರ್ಲಹಳ್ಳಿಗಳಲ್ಲಿ ರೈತರ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ. ಹುರ್ಲಹಳ್ಳಿಯ ರೈತ ವೆಂಕಟೇಶಪ್ಪಗೆ ಸೇರಿದ 2 ಎಕರೆ ಎಲೆಕೋಸು, ವೆಂಕಟರಾಮಪ್ಪ ಎಂಬುವರ 1 ಎಕರೆ ಟೊಮ್ಯಾಟೊ, ನಲ್ಲಗುಟ್ಲಹಳ್ಳಿಯ ನಾರಾಯಣಸ್ವಾಮಿಯ 2 ಎಕರೆ ಟೊಮ್ಯಾಟೊ, 1 ಎಕರೆ ಬೀನ್ಸ್​, ಹರೀಶ್​ ಅವರ 1 ಎಕರೆ ಟೊಮ್ಯಾಟೊ,1 ಎಕರೆ ಎಲೆಕೋಸು, ಶ್ರೀನಿವಾಸ್​ ಎಂಬುವರ 1 ಎಕರೆ ಟೊಮ್ಯಾಟೊ, ವೆಂಕಟರಾಮಪ್ಪ 3 ಎಕರೆ ಎಲೆಕೋಸು, 2 ಎಕರೆ ಟೊಮ್ಯಾಟೊ, ರಾಮಪ್ಪ ಅವರ ವಿಳ್ಯದೆಲೆ ಸೇರಿ ತೋಟಗಾರಿಕೆ ಇಲಾಖೆೆಯ ಅಂದಾಜು ಒಟ್ಟು 2.2 ಹೆಕ್ಟರ್​ ಪ್ರದೇಶದ ಟೊಮ್ಯಾಟೊ, 3.6 ಹೆಕ್ಟೇರ್​ ಎಲೆಕೋಸು, 2 ಹೆಕ್ಟೇರ್​ ಬೀನ್ಸ್​, ಹಾಗೂ 0.5 ಹೆಕ್ಟೇರ್​ ವೀಳ್ಯದೆಲೆ ಸೇರಿ ಒಟ್ಟು ಬೂದಿಕೋಟೆ ಹೋಬಳಿ ವ್ಯಾಪ್ತಿಯಲ್ಲಿ 8.1 ಹೆಕ್ಟೇರ್​ ಬೆಳೆಗಳು ಹಾನಿಯಾಗಿವೆ. ತಿಂಗಳುಗಟ್ಟಲೆ ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ಮಣ್ಣುಪಾಲಾಗಿವೆ. ವರ್ಷದ ಮೊದಲ ಮಳೆೆ ರೈತನ ಬದುಕನ್ನು ನಷ್ಟಕ್ಕೆ ದೂಡಿದ್ದು, ನೆರವಿಗೆ ಸರ್ಕಾರ ಬರಬೇಕು ಎನ್ನುವುದು ನಷ್ಟ ಅನುಭವಿಸಿದ ರೈತರ ಒತ್ತಾಯವಾಗಿದೆ.

ಸಾಲ ಮಾಡಿ ಲಕ್ಷಾಂತರ ರೂ.ಬಂಡವಾಳ ಹಾಕಿ ಬೆಳೆದ ಬೆಳೆಗಳು ಮಣ್ಣುಪಾಲಾಗಿವೆ. ಸದ್ಯ ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇತ್ತು, ಮಳೆಯ ಅವಾಂತರಕ್ಕೆ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಯಿತು. ಸರ್ಕಾರಪರಿಹಾರ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು. ನಾರಾಯಣಪ್ಪ, ರೈತ ನಲ್ಲಗುಟ್ಲಹಳ್ಳಿ ಅಕಾಲಿಕ ಮಳೆಯಿಂದ ರೈತರ ಬೆಳೆಗಳಿಗೆ ನಷ್ಟ ಉಂಟಾಗಿದ್ದು, ಹಾನಿಗೀಡಾದ ರೈತರ ಬೆಳೆಗಳನ್ನು ಪರಿಶೀಲಿಸಿದೆ. 8.1 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆಗಳು ನಾಶವಾಗಿದ್ದು, ನಷ್ಟದ ವರದಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ರೈತರು ಬೆಳೆ ನಷ್ಟದ ಪರಿಹಾರಕ್ಕಾಗಿ ಪಹಣಿ, ಬ್ಯಾಂಕ್​ ಖಾತೆ ಬುಕ್​, ಆಧಾರ್​ ಕಾರ್ಡ್​ ಸೇರಿ ಸಂಬಂಧಿಸಿದ ದಾಖಲೆಗಳನ್ನು ಆಯಾ ನಾಡಕಚೇರಿಗೆ ಸಲ್ಲಿಸಬೇಕು. ಶಿವಾರೆಡ್ಡಿ, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net