1258 ಮನೆಗಳ ಹಕ್ಕುಪತ್ರ ವಿತರಣೆಗೆ ಕ್ರಮ

ashraya meeting
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಎಸ್.ಎಂ. ಕೃಷ್ಣಾನಗರ ಮತ್ತು ಸೊನಿಯಾಗಾಂಧಿ ನಗರದಲ್ಲಿ ಬಾಕಿ ಉಳಿದಿರುವ ಒಟ್ಟು 1258 ಮನೆಗಳ ಹಕ್ಕುಪತ್ರಗಳನ್ನು ಒಂದು ತಿಂಗಳ ಒಳಗೆ ವಿತರಣೆಗೆ ಕ್ರಮ ವಹಿಸುವಂತೆ ಸ್ಲಮ್ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಗಡುವು ನೀಡಿದರು.

ಇಲ್ಲಿಯ ಪಾಲಿಕೆ ಆವರಣದಲ್ಲಿರುವ ತಮ್ಮ ಜನ ಸಂಪರ್ಕ ಕಚೇರಿಯಲ್ಲಿ ಶುಕ್ರವಾರ ಹು-ಧಾ ಪೂರ್ವ ಕ್ಷೇತ್ರದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮೂಲ ಫಲಾನುಭವಿಗಳಿಂದ ಖರೀದಿ, ಅನಧಿಕೃತ ವಾಸ, ವಾರಸಾ ಪ್ರಕಾರ ಹಕ್ಕು ಹೊಂದಿರುವವರು ಸೇರಿ ಈ ಹಿಂದೆ ನಡೆದ ಸಮೀಕ್ಷೆಯನ್ನು ಪರಿಗಣಿಸಿ ಯಾವುದೇ ತಾರತಮ್ಯ ಮಾಡದೇ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಬೇಕು ಎಂದು ಸೂಚಿಸಿದರು.

ಎಸ್.ಎಂ. ಕೃಷ್ಣಾನಗರದಲ್ಲಿ 570 ಮತ್ತು ಸೋನಿಯಾಗಾಂಧಿ ನಗರದಲ್ಲಿ 688 ಒಟ್ಟು 1258ಮನೆಗಳ ಹಕ್ಕುಪತ್ರಗಳ ವಿತರಣೆಗೆ ಇಂದಿನ ಸಭೆಯಲ್ಲಿ ಅನುಮೋದನೆ ನೀಡಲಾಗುತ್ತಿದೆ. ಒಬ್ಬ ವ್ಯಕ್ತಿಗೆ ಒಂದೇ ಬಾರಿ ಸರ್ಕಾರಿ ಯೋಜನೆಗಳು ದೊರೆಯಬೇಕು. ಇದಕ್ಕಾಗಿ ಒಂದು ಸಾಫ್ಟವೇರ್ ಸಿದ್ಧಪಡಿಸಬೇಕು. ಸರ್ಕಾರದಿಂದ ಯೋಜನೆಗಳು ಪಡೆಯುವಾಗ ಫಲಾನುಭವಿಯ ದತ್ತಾಂಶಗಳನ್ನು ಸಂಗ್ರಹಿಸಬೇಕು. ಈ ಕುರಿತು ಪಾಲಿಕೆ ಆಯುಕ್ತರು ಕೂಡಲೇ ಸಾಫ್ಟವೇರ್ ಸಿದ್ಧಪಡಿಸಲು ಕ್ರಮವಹಿಸಬೇಕು ಎಂದರು.

50ಲಕ್ಷ ರೂ. ವೆಚ್ಚದಲ್ಲಿ ಪಶು ಆಸ್ಪತ್ರೆ

ಬಿಡನಾಳದ ಬೀಡಿ ಕಾರ್ವಿುಕರ ನಗರ ಎರಡನೇ ಹಂತದಲ್ಲಿ ನಾಗರಿಕ ಸೌಲಭ್ಯಕ್ಕೆ ಮೀಸಲಿರಿಸಿದ ಎರಡು ಗುಂಟೆ ಜಾಗದಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ವನಿಸಲಾಯಿತು. ಜಾಗವನ್ನು ಪಶು ಇಲಾಖೆಗೆ ಹಸ್ತಾಂತರಿಸಲು ಅನುಮೋದನೆ ನೀಡಿದ ಅಬ್ಬಯ್ಯ, ಕೂಡಲೇ ಪಶು ಆಸ್ಪತ್ರೆ ನಿರ್ವಣಕ್ಕೆ ಕ್ರಮ ವಹಿಸಬೇಕು. ನಿರ್ವಣಕ್ಕೆ 50 ಲಕ್ಷ ರೂ. ನೀಡಲಾಗುವುದು. ಇನ್ನು ಹೆಚ್ಚಿನ ಅನುದಾನದ ಅವಶ್ಯವಿದಲ್ಲಿ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಡಾ ಆಯುಕ್ತ ಸಂತೋಷ ಬಿರಾದಾರ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net