ಸರ್ಕಾರಕ್ಕೆ ವಾಪಸಾಗಿದ್ದ 125 ಕೋಟಿ ರೂ. ಅನುದಾನ ಮತ್ತೆ ಮಂಜೂರು: ಶಾಸಕ ಜ್ಯೋತಿಗಣೇಶ್

25Tmk_Nominee_Abhinandane
Published on

ತುಮಕೂರು: ಕರೊನಾ ಸಂದರ್ಭದಲ್ಲಿ ಸರ್ಕಾರಕ್ಕೆ ವಾಪಸಾಗಿದ್ದ 125 ಕೋಟಿ ರೂ. ಅನುದಾನ ಮತ್ತೆ ಮಂಜೂರಾಗಿದ್ದು ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿಗೆ ಮತ್ತೆ ಚಾಲನೆ ದೊರೆತಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಮಹಾನಗರ ಪಾಲಿಕೆಗೆ ನಾಮನಿರ್ದೇಶನಗೊಂಡ ಐವರು ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಅವರು, ಕಳೆದ 2 ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗಿದೆ. ಅಲ್ಲದೆ, ಸ್ಮಾರ್ಟ್‌ಸಿಟಿ ಯೋಜನೆಯಡಿ 900 ಕೋಟಿ ರೂ., ವೆಚ್ಚದ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ತುಮಕೂರಿನ ಚಿತ್ರಣವೇ ಬದಲಾಗಲಿದೆ ಎಂದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಕಾಮಗಾರಿಗಳು ನಡೆಯುತ್ತಿದ್ದು ಇವುಗಳ ಗುಣಮಟ್ಟ ಕಾಯ್ದುಕೊಂಡರೆ, ಹತ್ತಾರು ವರ್ಷ ಇದರ ಉಪಯೋಗ ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ನಾಮನಿರ್ದೇಶಿತ ಸದಸ್ಯರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಉತ್ತಮ ಕಾರ್ಯಗಳಲ್ಲಿ ತೊಡಗುವಂತೆ ಸಲಹೆ ನೀಡಿದರು.

ಕಸವಿಲೇವಾರಿ, ರಾಜಕಾಲುವೆಗಳ ಒತ್ತುವರಿ ತೆರವು, ಈ ಹಿಂದೆ ನಡೆದಿರುವ ಅಕ್ರಮ ಖಾತೆಗಳ ಕುರಿತು ಮಾಹಿತಿ ಕಲೆ ಹಾಕಿ, ಜನರ ಮುಂದಿಡುವ ಕೆಲಸವನ್ನು ನಾಮಿನಿ ಸದಸ್ಯರು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು. ಅಲ್ಲದೆ, ಚುನಾಯಿತ ಬಿಜೆಪಿ ಕಾರ್ಪೋರೇಟರ್‌ಗಳು ಕಾಂಗ್ರೆಸ್, ಜೆಡಿಎಸ್ ಸದಸ್ಯರು ಮಾಡುವ ಆರೋಪಗಳಿಗೆ ದಾಖಲೆ ಸಮೇತ ಉತ್ತರ ನೀಡಬೇಕು. ವಿರೋಧ ಪಕ್ಷಗಳ ಸದಸ್ಯರಿಗೆ ಟೀಕಿಸುವ, ತಪ್ಪುಗಳನ್ನು ಎತ್ತಿ ಹಿಡಿಯುವ ಅಧಿಕಾರವಿದೆ. ಆದರೆ, ಸರಿಯಾದ ತಿಳಿವಳಿಕೆ ಇಲ್ಲದೆ, ದಾಖಲೆ ರಹಿತ ಆರೋಪ ಸರಿಯಲ್ಲ ಎಂದರು.

ಪಟ್ಟಣ ಯೋಜನಾ ಸ್ಥಾಯಿಸಮಿತಿ ಅಧ್ಯಕ್ಷ ಎಚ್.ಮಲ್ಲಿಕಾರ್ಜುನಯ್ಯ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್, ಕಾರ್ಪೋರೇಟರ್‌ಗಳಾದ ವಿನಯ್ ಜೈನ್, ಕೆ.ಎನ್.ಶಿವರಾಜು, ಡಿ.ಎ.ಮೋಹನ್, ಸಿ.ನರಸಿಂಹಸ್ವಾಮಿ, ಆರ್.ತ್ಯಾಗರಾಜಸ್ವಾಮಿ, ಟಿ.ವಿ.ವಿಶ್ವನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net