ಜಿಲ್ಲೆಯ ಸಹಕಾರ ಸಂಘಗಳಿಗೆ ಹೆಚ್ಚುವರಿ ಸಾಲ ನೀಡಲು 125 ಕೋಟಿ ಮೀಸಲು: ಡಿ.ಎಸ್.ಸುರೇಶ್

DS Suresh
Published on

ಚಿಕ್ಕಮಗಳೂರು: ಜಿಲ್ಲೆಯ ಸಹಕಾರ ಸಂಘಗಳಿಗೆ ಹೆಚ್ಚುವರಿ ಸಾಲ ವಿತರಿಸಲು 125 ಕೋಟಿ ರೂ. ಮೀಸಲಿಡಲಾಗಿದ್ದು, ಯಾವುದೇ ತಾರತಮ್ಯವಿಲ್ಲದೆ ಎಲ್ಲ ರೀತಿಯ 223 ಸಂಘಗಳಿಗೂ ಇಷ್ಟರಲ್ಲೇ ಸಾಲ ವಿತರಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಡಿ.ಎಸ್.ಸುರೇಶ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಕಳೆದ ಐದಾರು ವರ್ಷಗಳ ಬೇಡಿಕೆ ಇದು. ಇದನ್ನು ಈಡೇರಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಸಹಕಾರಿ ಸಂಘಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ಸಾಲ ಒದಗಿಸುವ ಯೋಜನೆಯಲ್ಲಿ ಕುಟುಂಬದಲ್ಲಿರುವ ಒಬ್ಬರನ್ನು ಹೊರತುಪಡಿಸಿ ಮಿಕ್ಕವರಿಗೆ ಈ ಸೌಲಭ್ಯ ಅನ್ವಯಿಸದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವು ರೈತರು ಸರ್ಕಾರದ ಈ ತೀರ್ಮಾನದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಕುಟುಂಬದಲ್ಲಿ ಐದಾರು ಸಹೋದರರಿದ್ದು, ಅವರೆಲ್ಲರೂ ಪ್ರತ್ಯೇಕ ಪಹಣಿ ತೋರಿಸಿ ಈ ಸೌಲಭ್ಯ ಪಡೆದರೆ ಇತರ ಅರ್ಹರಿಗೆ ಅನ್ಯಾಯವಾದಂತಾಗುತ್ತದೆ. ಆದರೂ ಈ ಸಂಬಂಧ ಸರ್ಕಾರದ ಜತೆ ಮಾತನಾಡುವುದಾಗಿ ತಿಳಿಸಿದರು.

ನಬಾರ್ಡ್‍ನಿಂದ ಅನುದಾನ ಕಡಿತ ಆಗಿಲ್ಲ

ಸಹಕಾರ ಬ್ಯಾಂಕ್‍ಗಳ ಕಾರ್ಯ ನಿರ್ವಹಣೆಯ ಮೇಲೆ ವರ್ಗೀಕರಿಸಿ ಲೆಕ್ಕಪರಿಶೋಧನೆ ವರದಿ ಆಧರಿಸಿ ಮರು ಹಣಕಾಸು ಸೌಲಭ್ಯ ಕೊಡುವುದು ನಬಾರ್ಡ್‍ನ ಸಂಪ್ರದಾಯ. ನಬಾರ್ಡ್‍ನಿಂದ ಡಿಸಿಸಿ ಬ್ಯಾಂಕ್‍ಗೆ ಯಾವುದೇ ರೀತಿಯ ಅನುದಾನ ಕಡಿತ ಆಗಿಲ್ಲ. ಸಾಲ ವಸೂಲಾತಿ ಮತ್ತು ಬ್ಯಾಂಕ್‍ನ ಕಾರ್ಯ ಜಾಲ ವಿಸ್ತರಣೆ ಹೆಚ್ಚಿಸಿದಷ್ಟು ನಬಾರ್ಡ್ ಮೂಲ ಮುಂಗಡ ಹಣ ಹೆಚ್ಚು ಒದಗಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆಲವು ಬ್ಯಾಂಕ್‍ಗಳಲ್ಲಿ ಸುಸ್ತಿಸಾಲ ಹೆಚ್ಚಾಗಿದೆ. ಹಿಂದೆ ಆಧಾರವಿಲ್ಲದೆ ಶೂನ್ಯ ಬಡ್ಡಿ ದರದಲ್ಲಿ ಸಾಕಷ್ಟು ಸ್ವಸಹಾಯ ಸಂಘಗಳಿಗೆ ಸಾಲ ನೀಡಿರುವುದು ಇದಕ್ಕೆ ಕಾರಣ. ಅವುಗಳ ವಸೂಲಾತಿಗೆ ಈಗ ಶಿಸ್ತು ಕ್ರಮ ಕೈಗೊಳ್ಳಬೇಕಾಗಿದೆ. ಈ ವಿಚಾರದಲ್ಲಿ ಮುಂದೆ ಗೊಂದಲ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಕ್ರಮ ಕಂಡು ಬಂದರೆ ಕಾನೂನು ಕ್ರಮ

ಹಿಂದಿನ ಆಡಳಿತ ಮಂಡಳಿಯ ಅವ„ಯಲ್ಲಿ ನಡೆದಿರುವ ಅವ್ಯವಹಾರ, ಅಕ್ರಮಗಳ, ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಅಕ್ರಮ ನಡೆದಿರುವುದು ಗಮನಕ್ಕೆ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಜಿಲ್ಲೆಯಲ್ಲಿ ಒಟ್ಟು 28 ಶಾಖೆಗಳನ್ನು ಹೊಂದಿದ್ದು, ಖಾಸಗಿ ವಾಣಿಜ್ಯ ಬ್ಯಾಂಕ್‍ಗಳಿಗೆ ಸ್ಪರ್ಧೆ ನೀಡುವ ಸೌಲಭ್ಯ ಗ್ರಾಹಕರಿಗೆ ನೀಡುವ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net