

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ (ಕೆಸಿಸಿ ಬ್ಯಾಂಕ್) ಸ್ಥಾಪನೆಯಾಗಿ 109 ವರ್ಷಗಳು ಪೂರ್ಣಗೊಂಡಿದ್ದು, 2024-25ನೇ ಸಾಲಿನಲ್ಲಿ 1213 ಕೋಟಿ ರೂ. ಠೇವು ಸಂಗ್ರಹ, 700 ಕೋಟಿ ರೂ. ಕೃಷಿ ಸಾಲ ಹಾಗೂ 500 ಕೋಟಿ ರೂ.ಕೃಷಿಯೇತರ ಸಾಲ ವಿತರಣೆ ಗುರಿ ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ, ಗದಗ ಹಾಗೂ ಹಾವೇರಿ ವ್ಯಾಪ್ತಿಯನ್ನು ಒಳಗೊಂಡಿರುವ ಬ್ಯಾಂಕ್, ಸದ್ಯ 63 ಶಾಖೆಗಳನ್ನು ಹೊಂದಿದೆ. ಪ್ರಸಕ್ತ ಸಾಲಿನಲ್ಲಿ 4. 64 ಕೋಟಿ ರೂ. ಲಾಭ ಗಳಿಕೆ ಮಾಡಿದೆ. ಸಾಲ ವಸೂಲಾತಿಯಲ್ಲಿ ಸಹ ಉತ್ತಮ ಪ್ರಗತಿ ಸಾಧಿಸಿದ್ದು, ಎನ್ಪಿಎ ಪ್ರಮಾಣ ಶೇ. 2.75ರಷ್ಟಿದೆ. ಮುಂದಿನ ದಿನಗಳಲ್ಲಿ ಎನ್ಪಿಎ ಪ್ರಮಾಣ ಮತ್ತಷ್ಟು ತಗ್ಗಿಸಲಾಗುವುದು ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಪುನಶ್ಚೇತನಗೊಳಿಸಲು ಅನೇಕ ಉಪ ಕ್ರಮಗಳನ್ನು ಕೈಗೊಳ್ಳಲಾಗಿದೆ. ಠೇವಣಿ ಮೇಲೆ ಸ್ಪರ್ಧಾತ್ಮಕ ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದ್ದು, ಹಿರಿಯ ನಾಗರಿಕರಿಗೆ ಶೇ. 0.50ರಷ್ಟು ವಿಶೇಷ ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ. ಪ್ರತಿ ತಿಂಗಳು ಶಾಖೆಗಳಲ್ಲಿ ಹೊಸ ಬೆಳಕು ಕಾರ್ಯಕ್ರಮ, ಗ್ರಾಹಕರ ಸಭೆ ಆಯೋಜಿಸಿ ಬ್ಯಾಂಕಿನ ಸೇವಾ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 49682 ರೈತರಿಗೆ 360.18 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ. 601 ರೈತರಿಗೆ 31.33 ಕೋಟಿ ರೂ. ಕೃಷಿ ಮಾಧ್ಯಮಿಕ ಸಾಲ ವಿತರಿಸಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ 15 ಹೊಸ ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಬ್ಯಾಂಕಿನ ಪ್ರಯೋಜನ ಸಿಗಲಿ ಎಂಬ ಕಾರಣಕ್ಕೆ ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಉಪಾಧ್ಯಕ್ಷ ನಿಂಗನಗೌಡ ಮರಿಗೌಡರ, ನಿರ್ದೇಶಕರಾದ ಜಿ.ಪಿ. ಪಾಟೀಲ, ಮಲ್ಲಿಕಾರ್ಜುನ ಹೊರಕೇರಿ, ಮಂಜುನಾಥಗೌಡ ಮುರಳ್ಳಿ, ಸಿಇಒ ಡಾ. ಸುನಿತಾ ಸಿದ್ರಾಮ, ಪ್ರಧಾನ ವ್ಯವಸ್ಥಾಪಕ ಎಸ್.ವಿ. ಹೂಗಾರ, ನಿರ್ದೇಶಕರು, ಆಡಳಿತ ಮಂಡಳಿ ಸದಸ್ಯರು, ಇತರರು ಇದ್ದರು.