

ಗದಗ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲಾದ್ಯಂತ 121 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಾನಿಗೊಳಗಾದ ಮನೆಗಳನ್ನು ಆಯಾ ತಾಲೂಕು ತಹಸೀಲ್ದಾರ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು, ಜಿಲ್ಲಾಡಳಿತ ನಿತ್ಯ ವರದಿ ಪಡೆಯುತ್ತಿದೆ.
ಕೇವಲ ಮಳೆಯಿಂದ ಅಷ್ಟೇ ಅಲ್ಲದೆ ಮಲಪ್ರಭಾ ಮತ್ತು ತುಂಗಭದ್ರಾ ಪ್ರವಾಹದಿಂದ ಆಪತ್ತು ಎದುರಿಸಬಹುದಾದ ನದಿ ಪಾತ್ರದ ಹಳ್ಳಿ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮುನ್ಸೂಚನೆ ನೀಡಿದೆ. ಪ್ರಸಕ್ತ ವಿಪತ್ತು ನಿರ್ವಹಣೆಗೆ(ಅತಿವೃಷ್ಟಿ, ಅನಾವೃಷ್ಟಿ) ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 3 ಕೋಟಿ ರೂಪಾಯಿ ಅನುದಾನ ಲಭ್ಯವಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಜಿಲ್ಲೆಯಲ್ಲಿ ಬೆಣ್ಣೆಹಳ್ಳ, ಮಲಪ್ರಭಾ, ತುಂಗಭದ್ರಾ ನದಿ ದಡದಲ್ಲಿನ 25 ಗ್ರಾಪಂ ವ್ಯಾಪ್ತಿಯ 53 ಹಳ್ಳಿಗಳಲ್ಲಿ ನೆರೆ ಹಾವಳಿ ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಮಲಪ್ರಭಾ, ಬೆಣ್ಣೆಹಳ್ಳ ತೀರದ ನರಗುಂದ ಮತ್ತು ರೊಣ ತಾಲೂಕಿನಲ್ಲಿ ತಲಾ 16 ಹಳ್ಳಿಗಳನ್ನು ಮತ್ತು ತುಂಗಭದ್ರಾ ನದಿ ತೀರದ ಮುಂಡರಗಿ ತಾಲೂಕಿನಲ್ಲಿ 11 ಹಾಗೂ ಶಿರಹಟ್ಟಿ ತಾಲೂಕಿನಲ್ಲಿ 10 ಹಳ್ಳಿಗಳನ್ನು ಗುರುತಿಸಲಾಗಿದೆ. ವಿಪತ್ತು ನಿರ್ವಹಿಸಲು ಸಮಿತಿ ರಚಿಸಲಾಗಿದ್ದು, ಜಿಲ್ಲಾ ಮಟ್ಟದ ಪ್ರವಾಹ ಸಮಿತಿ ರಚಿಸಲಾಗಿದೆ. 56 ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ಈಗಾಗಲೇ ಗುರುತಿಸಿದೆ. ಇದರೊಂದಿಗೆ ಸಹಾಯವಾಣಿ ಕೇಂದ್ರ ತೆರೆಲಾಗಿದ್ದು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮುಂಗಾರಿನಲ್ಲಿ ಬೆಳೆ ನಷ್ಟ, ಮಾನವ ಮತ್ತು ಜಾನುವಾರು ಹಾನಿಗಳಿಗೆ ರಾಜ್ಯ(ಎಸ್‌ಡಿಆರ್‌ಎ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ(ಎನ್‌ಡಿಆರ್‌ಎ್) ವಿಭಾಗದಿಂದ ನೇರವಾಗಿ ಲಾನುಭವಿ ಖಾತೆಗೆ ಹಣ ಜಮೆ ಆಗಲಿದೆ.
ಬೆಳೆ ನಷ್ಟ ಸಂಭವಿಸಿದ ಪ್ರತಿ ಹೆಕ್ಟೇರ್ ಖುಷ್ಕಿ ಭೂಮಿಗೆ 13,600 ರೂ, ನೀರಾವರಿ ಭೂಮಿಯ ಪ್ರತಿ ಹೆಕ್ಟೇರ್‌ಗೆ 25,000ರೂ, ಬಹುವಾರ್ಷಿಕ ಬೆಳೆಗಳ ನಾಶಕ್ಕೆ ಪ್ರತಿ ಹೆಕ್ಟೇರ್ ಗೆ 28,000 ರೂ, ಹೈನುಗಾರಿಕೆ ಜಾನುವಾರು ಹಾನಿಗೆ 37,500ರೂ., ಎತ್ತು-ಕೋಣ ಇತ್ಯಾದಿ ಪ್ರಾಣಿ ಹಾನಿಗೆ 32,000 ರೂ., ಮತ್ತು ಆಡು-ಕುರಿ ಹಾನಿಗೆ 4000 ರೂ., ಗಳನ್ನು ಜಿಲ್ಲಾಡಳಿತ ವಿತರಿಸಲಿದೆ. ಜಿಲ್ಲೆಯಲ್ಲಿ ಈವರೆಗೆ 1 ಜಾನುವಾರು ಹಾನಿ, 121 ಮನೆಗಳಿಗೆ ಬಾಗಶಃ ಹಾನಿ ಸಂಭವಿಸಿ ಪರಿಹಾರ ಮೊತ್ತವನ್ನು ನಿಗದಿಪಡಿಸಲಾಗಿದೆ.
ತಾಲೂಕು - ಹಾನಿಗೀಡಾದ ಮನೆ- ಪರಿಹಾರ (ಲಕ್ಷ ರೂ.ಗಳಲ್ಲಿ)
ಗದಗ - 45 - 1.80
ಗಜೇಂದ್ರಗಡ - 11 - 0.44
ಲಕ್ಷ್ಮೇಶ್ವರ - 25 - 1.00
ಮುಂಡರಗಿ - 5 - 0.20
ನರಗುಂದ - 13 - 0.52
ರೋಣ - 4 - 0.16
ಶಿರಹಟ್ಟಿ - 18 - 0.72
ಕೃಷಿಭೂಮಿಗೆ ವಿಪತ್ತು ನಿರ್ವಹಣೆಯ ಮೊತ್ತ:
ಹಾನಿ(ಹೆಕ್ಟೇರ್ ಗೆ) - ಎನ್‌ಡಿಆರ್‌ಎ್ - ಎಸ್‌ಡಿಆರ್‌ಎ್ - ಒಟ್ಟು
ಖುಷ್ಕಿ ಭೂಮಿ - 8500 - 5100 - 13600
ನೀರಾವರಿ ಭೂಮಿ - 17000 - 8000 - 25000ಬಹುವಾರ್ಷಿಕ ಬೆಳೆ - 22500 - 5500 - 28000
ಸಿಎಂ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಪತ್ತು ನಿರ್ವಹಣೆ ಕುರಿತು ಸಭೆ ನಡೆಸಲಾಗಿದೆ. ಪ್ರವಾಹ ಸಂದರ್ಭದಲ್ಲಿ ಜನ-ಜಾನುವಾರು, ಸಾರ್ವಜನಿಕ ಆಸ್ತಿ ರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಸೂಚಿಸಲಾಗಿದೆ. ಎಚ್.ಕೆ. ಪಾಟೀಲ, ಸಚಿವ