15 ಕೆಜಿ ಟೊಮ್ಯಾಟೊ ಬಾಕ್ಸ್​ಗೆ 1,200

xxxxxxx
Published on

ಎನ್​.ಮುನಿವೆಂಕಟೇಗೌಡ ಕೋಲಾರ

ಜಿಲ್ಲೆಯ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಟೊಮ್ಯಾಟೊ ಬೆಳೆಗಾರರಿಗೆ ಮತ್ತೆ ಶುಕ್ರದೆಸೆ ಬಂದಿದ್ದು, 15 ಕೆಜಿ ಬಾಕ್ಸ್​ ಒಂದಕ್ಕೆ 1,200 ರೂ. ಗಡಿ ದಾಟಿದೆ. ಇನ್ನೂ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ.

ಪ್ರತಿವರ್ಷ ಜೂನ್​, ಜುಲೈ ಮತ್ತು ಆಗಸ್ಟ್​ನಲ್ಲಿ ಟೊಮ್ಯಾಟೊಗೆ ಉತ್ತಮ ಬೆಲೆ ಬರುವುದು ವಾಡಿಕೆ. ಈ ಮಧ್ಯೆ ಆಗಾಗ ಹವಾಮಾನ ವೈಪರೀತ್ಯ ಹಾಗೂ ಫಸಲು ಕಡಿಮೆಯಾದಾಗ ಬೆಲೆ ಏರಿಕೆಯಾಗುವುದು ಸಹಜ. ನವೆಂಬರ್​, ಡಿಸೆಂಬರ್​ನಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾಗುವುದಿಲ್ಲ. ಆದರೆ ಫೆಂಗಲ್​ ಚಂಡಮಾರುತ ಪರಿಣಾಮ ಬೆಲೆ ಏರಿಕೆಕೆಯಾಗಿದೆ.

ವೈರಸ್​, ಅಂಗಮಾರಿ ಮತ್ತು ಬಿಂಗಿ ರೋಗಗಳ ನಡುವೆಯೂ ಟೊಮ್ಯಾಟೊಗೆ ಉತ್ತಮ ಬೆಲೆ ಬರುವಂತಾಗಿದೆ. ರೈತರು ಲಕ್ಷಾಂತರ ರೂ. ಖರ್ಚು ಮಾಡಿ ರೋಗಗಳನ್ನು ಹತೋಟಿಗೆ ತಂದು ತೋಟಗಳಲ್ಲಿರುವ ಕಾಯಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಣಮಟ್ಟ ಹಾಗೂ ಫಸಲು ಕಡಿಮೆಯಾಗಿದ್ದು, ಇದಕ್ಕೆ ತಕ್ಕಹಾಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವಂತಾಗಿದೆ.

ಒಂದು ತಿಂಗಳ ಹಿಂದೆ ಕೆಂಪು ರಾಣಿಯ ಬೆಲೆ ಕುಸಿದಿತ್ತು. 15 ಕೆಜಿ ಬಾಕ್ಸ್​ 250 ರಿಂದ 400 ರೂ.ವರೆಗೆ ಮಾರಾಟವಾಗಿತ್ತಿತ್ತು. ಒಂದು ವಾರದಿಂದ ಬೆಲೆ ಏರಿಕೆ ಆಗುತ್ತಲೇ ಇದ್ದು, ಫೆಂಗಲ್​ ಚಂಡಮಾರುತದ ಎಫೆಕ್ಟ್​ನಿಂದ ಶುಕ್ರವಾರ ದಿಢೀರನೆ ಬೆಲೆ ಏರಿಕೆಯಾಗಿದೆ. ಮಳೆ ನಿಂತರೂ ಸಹ ಬಿಂಗಿ, ಅಂಗಮಾರಿ ರೋಗ ಟೊಮ್ಯಾಟೊ ಬೆಳೆಗಾರರನ್ನು ಕಾಡುತ್ತಿರುವುದರಿಂದ ತೋಟಗಳಲ್ಲಿ ಕಾಯಿ ಕೊಳೆತು ಉದುರುತ್ತಿರುತ್ತಿವೆ. ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದ್ದರಿಂದಲೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಪ್ರತಿವರ್ಷ ನವೆಂಬರ್​, ಡಿಸೆಂಬರ್​ ಮತ್ತು ಜನವರಿಯಲ್ಲಿ ಟೊಮ್ಯಾಟೊಗೆ ಸಾಧಾರಣ ಬೆಲೆ ಇರುತ್ತದೆ ಎಂದು ಬೆಳೆಗಾರರು ಬೆಳೆ ಮಾಡುವುದು ಕಡಿಮೆ. 15 ಕೆಜಿ ಟೊಮ್ಯಾಟೊ ಬಾಕ್ಸ್​ 300 ರೂ.ನಿಂದ ಪ್ರಾರಂಭಗೊಂಡು ಗುಣಮಟ್ಟ ಇರುವ ಟೊಮ್ಯಾಟೊ 1,200 ರೂ.ಗಳ ತನಕ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಉತ್ತಮ ಹಣ್ಣಿಗೆ ಅತ್ಯುತ್ತಮ ಬೆಲೆ

ಫೆಂಗಲ್​ ಚಂಡಮಾರುತದಿಂದ ಮಳೆ ಹೆಚ್ಚಾಗಿ ತೋಟಗಳಲ್ಲಿ ರೋಗ ಆವರಿಸಿಕೊಂಡಿರುವುದರಿಂದ ಟೊಮ್ಯಾಟೊ ಗುಣಮಟ್ಟ ಕಳೆದುಕೊಂಡಿದೆ. ಆದ್ದರಿಂದ ಗುಣಮಟ್ಟದ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾಗಿದೆ. ಹೊರಗಿನ ಟೊಮ್ಯಾಟೊ ಮಾರುಕಟ್ಟೆಗೆ ಬರದೆ ಇದ್ದರೆ 15 ಕೆ.ಜಿ. ಟೊಮ್ಯಾಟೊ ಬಾಕ್ಸ್​ 1,500 ರೂ.ಗಳು ದಾಟುವ ನಿರೀಕ್ಷೆ ಇದೆ.

ಶುಕ್ರವಾರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಟೊಮ್ಯಾಟೊ ಬಾಕ್ಸ್​ 300 ರೂ.ನಿಂದ 1,200 ರೂ. ತನಕ ಮಾರಾಟವಾಗಿದೆ. ಗುಣಮಟ್ಟದ ಟೊಮ್ಯಾಟೊ ಮಾರುಕಟ್ಟೆಗೆ ಬರುತ್ತಿಲ್ಲ. ಇದೇ ರೀತಿ ಇನ್ನು ಒಂದು ವಾರಗಳ ಕಾಲ ಬೆಲೆ ಇರುತ್ತದೆ. ಏರಿಕೆಯಾಗುವ ಸಾಧ್ಯತೆಗಳೂ ಇವೆ. ಹೊರ ರಾಜ್ಯಗಳಿಂದ ಟೊಮ್ಯಾಟೊ ಮಾರುಕಟ್ಟೆಗೆ ಬಂದರೆ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಮಳೆ ಅವಾಂತರದಿಂದ ಫಸಲಿನ ಮೇಲೆ ಹೊಡೆತ ಬಿದ್ದಿದೆ. ಇದರಿಂದ ಮಾರುಕಟ್ಟೆಗೆ ಬರುತ್ತಿರುವ ಕಾಯಿ ಕಡಿಮೆಯಾಗಿದೆ. ಗುಣಮಟ್ಟದ ಕಾಯಿ ಬೇಡಿಕೆ ಇದೆ.

 -ಮುನೇಗೌಡ

ಎನ್​.ಎಂ.ಆರ್​.ಮಂಡಿ ಮಾಲೀಕ

ಡಿಸೆಂಬರ್​ನಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾಗಿರುವುದು ಇತಿಹಾಸದಲ್ಲೇ ಇದೇ ಪ್ರಥಮ. 15 ಕೆ.ಜಿ.ಟೊಮ್ಯಾಟೊ ಬಾಕ್ಸ್​ 800 ರೂ.ಗಳು ಗಡಿ ದಾಟುತ್ತಿಲ್ಲ. ರಾಜ್ಯ ಸೇರಿ ಇತರೆ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿರುವ ಕಾರಣ ಟೊಮ್ಯಾಟೊ ಗುಣಮಟ್ಟ ಕಳೆದುಕೊಂಡಿದೆ. ಉತ್ತಮ ಗುಣಮಟ್ಟದ ಟೊಮ್ಯಾಟೊಗೆ ಬೇಡಿಕೆಯಿದೆ. ಹೊರ ದೇಶಗಳಿಂದಲೂ ಬೇಡಿಕೆ ಬರುತ್ತಿದೆ. 2000 ರೂ.ಗಳ ಗಡಿ ದಾಟಿದರೂ ಅಚ್ಚರಿ ಇಲ್ಲ. ಗುಣಮಟ್ಟದ ಟೊಮ್ಯಾಟೊಗಾಗಿ ಹುಡುಕಾಡುವ ಪರಿಸ್ಥಿತಿ ಇದೆ.

 -ಸಿಎಂಆರ್​ ಶ್ರೀನಾಥ್​

ಸಿ.ಎಂ.ಆರ್​. ಮಂಡಿ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net