120 ಕೋಟ್ಪಾ ಉಲ್ಲಂಘನೆ ಪ್ರಕರಣ ದಾಖಲು

HUN-AUG-22-2(COTPA ACT 2003 RIDE)
ಹುಣಸೂರು ತಾಲೂಕು ಸಿಬಿಟಿ ಕಾಲನಿಯ ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ ಕಾಯ್ದೆ ಉಲ್ಲಂಘಿಸಿದವರಿಗೆ ದಂಡ ಶುಲ್ಕ ವಿಧಿಸಿದರು. ರಾಜೇಶ್ವರಿ, ರುದ್ರಪ್ಪ, ಪುಟ್ಟನಾಯಕ, ವಿಜಯರಘು ಇತರರಿದ್ದರು.
Published on

ಹುಣಸೂರು: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಕೋಟ್ಪಾ ಕಾಯ್ದೆ 2003 ಅನ್ವಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದರು.

ತಾಲೂಕಿನ ಉದ್ದೂರು ಕಾವಲ್, ಆಸ್ಪತ್ರೆ ಕಾವಲ್ ಮತ್ತು ಸಿಬಿಟಿ ಕಾಲನಿ ವ್ಯಾಪ್ತಿಯಲ್ಲಿ ತಂಬಾಕು, ಬೀಡಿ, ಸಿಗರೇಟ್ ಮತ್ತು ಬೇಕರಿಗಳು ಮೇಲೆ ದಾಳಿ ನಡೆಸಿ 120ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಯಿತು. ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸಿದ ಅಂಗಡಿ ಮಾಲೀಕರಿಂದ ಒಟ್ಟು 19,900 ರೂ.ಗಳ ದಂಡ ಸಂಗ್ರಹಿಸಲಾಯಿತು.

ಈ ವೇಳೆ ಮಾತನಾಡಿದ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಶುಕ್ರವಾರ ತಂಡ ದಾಳಿ ನಡೆಸಿದ್ದು, ಗ್ರಾಮೀಣ ಭಾಗದ ಬೇಕರಿಗಳಲ್ಲೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಎಲ್ಲ ಅಂಗಡಿ ಮಾಲೀಕರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಿರುವಂತೆ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದ್ದು, ಸಾರ್ವಜನಿಕರು ಕಾಯ್ದೆಯನ್ನು ಪಾಲಿಸುವ ಮೂಲಕ ಸಹಕರಿಸಬೇಕಿದೆ. ವರ್ತಕರು ಪ್ರೌಢಾವಸ್ಥೆಗೆ ಬಾರದ ಚಿಕ್ಕಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ನಿಷೇಧಿಸಿರುವುದರ ಕುರಿತು ಅರಿವು ಮೂಡಿಸಲಾಗಿದೆ ಎಂದರು.

ದಾಳಿ ವೇಳೆ ಎಸಿಡಿಪಿಒ ಸೋಮಯ್ಯ, ಗ್ರಾಮಾಂತರ ಠಾಣೆಯ ಎಎಸ್‌ಐ ಪುಟ್ಟನಾಯಕ, ಪಿಸಿ ವಿಜಯರಘು, ಶಿಕ್ಷಣ ಇಲಾಖೆ ಇಸಿಒ ರುದ್ರಪ್ಪ, ಪಿಡಿಒ ಅರುಣ್‌ಕುಮಾರ್, ಹರೀಶ್, ಶ್ರೀಧರ್, ಮೋಹನ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪುಟ್ಟಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net