

ಹಾಸನ: ಜಿಲ್ಲೆಯಲ್ಲಿ ಬರಗಾಲದಿಂದಾಗಿ ಜಾನುವಾರುಗಳಿಗೆ ಕುಡಿಯಲು ನೀರು ಮತ್ತು ಮೇವಿನ ಸಮಸ್ಯೆ ಉಂಟಾಗಿದೆ. ಆದರೆ ಸರ್ಕಾರ ಬಿಡುಗಡೆ ಮಾಡಿರುವ 12 ಕೋಟಿ ಹಣವನ್ನು ಖರ್ಚು ಮಾಡಲು ನಾನಾ ತೊಡಕುಗಳಿವೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.
ನಗರದ ಸಂಸದರ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ನಿರ್ವಹಣೆಗಾಗಿ ಸರ್ಕಾರ 12 ಕೋಟಿ ರೂ. ಅನುದಾನವನ್ನು ಜಿಲ್ಲಾಧಿಕಾರಿಗೆ ನೀಡಿದೆ. ಅದರಲ್ಲಿ ಪ್ರತಿ ತಾಲೂಕಿಗೆ 50 ಲಕ್ಷ ರೂ. ಅನುದಾನ ಹಂಚಿಕೆ ಮಾಡಿದ್ದಾರೆ. ಇನ್ನು ಉಳಿದ ಎಂಟು ಕೋಟಿ ರೂ. ಜಿಲ್ಲಾಧಿಕಾರಿ ಖಾತೆಯಲ್ಲಿ ಇದೆ. ಆದರೆ ಹಂಚಿಕೆ ಮಾಡಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಎನ್‌ಡಿಆರ್‌ಎಫ್ ಮತ್ತು ಎಸ್‌ಟಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಆದ್ದರಿಂದ ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮತ್ತು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಹೇಮಾವತಿ ಜಲಾಶಯದಿಂದ ನಾಲೆಗಳ ಮೂಲಕ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬರಗಾಲದಿಂದ ಜನರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರದ ಮುಖಂಡರು ರಾಜ್ಯವನ್ನು ಮರೆತು ತೆಲಂಗಾಣದಲ್ಲಿ ಚುನಾವಣೆ ಮಾಡಲು ಹೋಗಿದ್ದಾರೆ. ಇದರಿಂದ ರಾಜ್ಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಜಿಲ್ಲೆಯಲ್ಲಿ ಮೂರು ಸಾವಿರ ಕೋಟಿ ರೂ.ನಷ್ಟು ಬೆಳೆ ನಷ್ಟವಾಗಿದೆ. ಆದರೆ ನಮಗೆ ಕೇವಲ 131 ಕೋಟಿ ರೂ. ಪರಿಹಾರ ಹಣ ಬರುತ್ತದೆ. ರಾಜ್ಯ ಸರ್ಕಾರ ಕೇಂದ್ರದ ಹಣವನ್ನು ಕಾಯುತ್ತಿದೆ. ಇದರ ಬದಲಾಗಿ ರೈತರ ಹಿತ ಕಾಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಶಿಕ್ಷಕರು ಮತ್ತು ಉಪನ್ಯಾಸಕರೆ ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಶಿಕ್ಷಣ ಸಚಿವರು ಜಿಲ್ಲೆಗೆ ಆಗಮಿಸಿ, ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ, ಜಿಲ್ಲಾ ಪಂಚಾಯಿತಿಯಲ್ಲಿ ಉಪ್ಪಿಟ್ಟು ಕಾಫಿ ಕುಡಿದುಕೊಂಡು ಹೋಗಿದ್ದಾರೆ. ಶಿಕ್ಷಣ ಇಲಾಖೆ ಇಂಥ ಪರಿಸ್ಥಿತಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ. ಕೇವಲ ಗೂಟದ ಕಾರು ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅವುಗಳನ್ನು ಬಗೆಹರಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇಂಥವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿರುವುದು ನಮ್ಮ ದುರ್ದೈವ ಎಂದು ಕಿಡಿಕಾರಿದರು.
ಮಧು ಬಂಗಾರಪ್ಪ ನಮ್ಮ ಪಕ್ಷದ ಬಗ್ಗೆ ಮಾತನಾಡುವ ಮೊದಲು ಅವರು ಎಲ್ಲಿಂದ ಬಂದರು ಎಂಬುದನ್ನ ಅರಿತುಕೊಳ್ಳಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಗಿರಾಕಿ ಈಗ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಟಾಂಗ್ ನೀಡಿದರು.
ಶುಕ್ರವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೊಳೆನರಸೀಪುರದಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಸಭೆ ನಡೆಸಲಿದ್ದಾರೆ. ಮುಂಬರುವ ಚುನಾವಣೆಗೆ ಬಗ್ಗೆ ಹಾಗೂ ಪಕ್ಷ ಸಂಘಟನೆ ವಿಷಯವಾಗಿ ಚರ್ಚೆ ನಡೆಲಿದ್ದಾರೆ ಎಂದು ತಿಳಿಸಿದರು.
ತೆಂಗಿನಕಾಯಿ ಒಡೆದು ಪ್ರತಿಭಟನೆ:
ಜಿಲ್ಲೆಯಲ್ಲಿ ತೆಂಗು ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ. ಅಲ್ಲದೆ ಕೊಬ್ಬರಿ ಮತ್ತು ತಂಗಿಗೆ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿರುವುದರಿಂದ ಡಿಸೆಂಬರ್ 2ರಂದು ನಗರದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ತೆಂಗಿನಕಾಯಿ ಮತ್ತು ಕೊಬ್ಬರಿಯನ್ನು ಒಡೆಯುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.