12 ಕಳ್ಳತನ ಪ್ರಕರಣಗಳನ್ನು ಭೇದಿಸಿದ ಪೊಲೀಸರು

11rajesh3
Published on

ಚಾಮರಾಜನಗರ: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 12 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಸುಮಾರು 285 ಕೆ.ಜಿ ಚಿನ್ನಾಭರಣ ಮತ್ತು ವಾಹನಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಇತ್ತೀಚೆಗೆ ಹಲವಾರು ಕಳವು ಪ್ರಕರಣಗಳು ದಾಖಲಾಗುತ್ತಿತ್ತು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡ ಹಿನ್ನೆಲೆಯಲ್ಲಿ ಚಾಮರಾಜನಗರ ಉಪವಿಭಾಗದಿಂದ 7 ಮತ್ತು ಕೊಳ್ಳೇಗಾಲ ಉಪ ವಿಭಾಗದಿಂದ 5 ಪ್ರಕರಣಗಳನ್ನು ಒಳಗೊಂಡಂತೆ ಒಟ್ಟು 12 ಪ್ರಕರಣಗಳನ್ನು ಬೇಧಿಸಲಾಗಿದೆ. ಈ ಪ್ರಕರಣಗಳಲ್ಲಿ 285 ಗ್ರಾಂ ಚಿನ್ನಾಭರಣ, 45 ಗ್ರಾಂ ಬೆಳ್ಳಿ, 2 ಕಾರು, 10 ದ್ವಿಚಕ್ರ ವಾಹನಗಳು ಹಾಗೂ 55,000 ರೂ, ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ 22.23 ಲಕ್ಷ ರೂ, ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಎಲ್ಲಾ ಪ್ರಕರಣಗಳಿಂದ ಆರೋಪಿಗಳಾದ ಮುಜಾಹಿದ್ ಖಾನ್, ಆಕಾಶ್, ಸಂತೋಷ್, ಪ್ರವೀಣ್ ಕುಮಾರ್, ನಟೇಶ್, ಚಂದಪ್ಪ, ಬಂಗಾರಸ್ವಾಮಿ, ಮುಬಾರಕ್, ಚಂದನ್, ಅಭಿ, ವಿವೇಕ್, ಸಿದ್ದರಾಜು ಹಾಗೂ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಡಿವೈಎಸ್ಪಿಗಳಾದ ಸ್ನೇಹಾರಾಜ್, ಧರ್ಮೇಂದ್ರ ಹಾಗೂ ವಿವಿಧ ಠಾಣೆಯ ಪೊಲೀಸರು ಹಾಜರಿದ್ದರು.

ವಿವಿಧ ಠಾಣೆಗಳ ಪ್ರಕರಣಗಳು:

ಜಿಲ್ಲೆಯ ಚಾಮರಾಜನಗರ ಉಪವಿಭಾಗದ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 3 ಪ್ರಕರಣ, ಗ್ರಾಮಾಂತರ ಪೊಲೀಸ್ ಠಾಣೆಯ 2 ಪ್ರಕರಣ ಮತ್ತು ಪೂರ್ವ ಪೊಲೀಸ್ ಠಾಣೆ ಹಾಗೂ ಕುದೇರು ಪೊಲೀಸ್ ಠಾಣೆಯ ತಲಾ 1 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕೊಳ್ಳೇಗಾಲ ಉಪವಿಭಾಗದ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ 2, ಯಳಂದೂರು ಪೊಲೀಸ್ ಠಾಣೆಯ 2 ಹಾಗೂ ರಾಮಾಪುರ ಪೊಲೀಸ್ ಠಾಣೆಯ 1 ಪ್ರಕರಣವನ್ನು ಬೇಧಿಸಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿಯೂ ಚಿನ್ನಾಭರಣ, ಕಾರು ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡು 14 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಪ್ರಾಪ್ತ ಬಾಲಕನು ಭಾಗಿ:

ಯಳಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನು ಕಳ್ಳತನದಲ್ಲಿ ಭಾಗಿಯಾಗಿದ್ದಾನೆ. ಈ ನಿಟ್ಟಿನಲ್ಲಿ ಬಾಲಕನನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಒಪ್ಪಿಸಲಾಗಿದೆ. ಅದಲ್ಲದೇ ಹೆಚ್ಚಿನ ಪ್ರಕರಣಗಳಲ್ಲಿ ಯುವಕರೇ ಹೆಚ್ಚು ಭಾಗಿಯಾಗಿದ್ದಾರೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಪ್ಪೊಪ್ಪಿಕೊಂಡಿದ್ದರೂ ಕೂಡ ಕೆಲವು ತಾಂತ್ರಿಕ ಕಾರಣದಿಂದ ಆಕೆಯ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ಎಸ್ಪಿ ಡಾ.ಬಿ.ಟಿ.ಕವಿತಾ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net