

ತುಮಕೂರು: ನಗರದ ವಿವಿಧ ಬಡಾವಣೆಯ 12 ಉದ್ಯಾನವನಗಳನ್ನು 1.74 ಕೋಟಿ ರೂ., ವೆಚ್ಚದಲ್ಲಿ ತುಮಕೂರು ನಗರಾಭಿವೃದ್ಧಿ (ಟೂಡಾ) ವತಿಯಿಂದ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈವರೆಗೆ ಸ್ಮಾರ್ಟ್ಸಿಟಿ ವತಿಯಿಂದ 35 ಕೋಟಿ ರೂಪಾಯಿವರೆಗೆ ನಗರದಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದ ಮಾರುತಿನಗರ 3ನೇ ಅಡ್ಡರಸ್ತೆಯ ಸಂಜೀವಿನಿ ಉದ್ಯಾನವನದಲ್ಲಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಾರ್ಕ್ಗಳ ಅಭಿವೃದ್ಧಿಗೆ ನಾಗರೀಕ ಸಮಿತಿಗಳ ಸಹಕಾರ ಅತೀ ಮುಖ್ಯವಾಗಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 1.74 ಕೋಟಿ ರೂ., ವೆಚ್ಚದಲ್ಲಿ 12 ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಿದ್ದು, ವರ್ಷದ ಹಿಂದೆಯೇ ಪಾರ್ಕ್ಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಕರೊನಾ ಹಿನ್ನಲೆಯಲ್ಲಿ ಯಾರೂ ಟೆಂಡರ್ನಲ್ಲಿ ಭಾಗವಹಿಸಿದ ಕಾರಣ, ಮತ್ತೆ ಟೆಂಡರ್ ಕರೆದು ಈಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
22 ಲಕ್ಷ ರೂ., ವೆಚ್ಚ: ಮಾರುತಿನಗರದ ಸಂಜೀವಿನಿ ಉದ್ಯಾನವನ ದೊಡ್ಡ ಪಾರ್ಕ್ ಆಗಿರುವುದರಿಂದ 22 ಲಕ್ಷ ರೂ.,ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ನಗರದಲ್ಲಿ ಪಾರ್ಕ್ಗಳ ನಿರ್ವಹಣೆಯಲ್ಲಿ ನಾಗರೀಕ ಸಮಿತಿಗಳ ಪಾತ್ರ ಹೆಚ್ಚಿನದಾಗಿದೆ. ತುಮಕೂರಿನಲ್ಲಿರುವ ಸುಮಾರು 70&80 ಪಾರ್ಕ್ಗಳು ಅಭಿವೃದ್ಧಿಪಡಿಸಲಾಗಿದ್ದು ಉಳಿದ ಪಾರ್ಕ್ಗಳನ್ನು ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುವುದು ಎಂದು ಜ್ಯೋತಿಗಣೇಶ್ ಹೇಳಿದರು.
ಮಂಜುನಾಥನಗರ ಪಾರ್ಕ್ಗೆ ಹೆಚ್ಚುವರಿ ವಾಕ್ಪಾತ್, ಬೆಂಚುಗಳನ್ನು ಅಳವಡಿಸುವ ಕಾಮಗಾರಿಗೆ 8.30 ಲಕ್ಷ, ಸರಸ್ವತಿಪುರಂ ಪಾರ್ಕ್ಗೆ ಚೈನ್ಲಿಂಕ್ ಫೆನ್ಸಿಂಗ್ ಅಳವಡಿಸುವ ಕಾಮಗಾರಿಗೆ 8.50 ಲಕ್ಷ, ಮಾರುತಿನಗರ ಸಂಜೀವಿನಿ ಪಾರ್ಕ್ ಅಭಿವೃದ್ಧಿಗೆ 21.90 ಲಕ್ಷ, ಮಹಾಲ್ಮನಗರ 5ನೇ ಕ್ರಾಸ್ 2ನೇ ಮುಖ್ಯರಸ್ತೆಯಲ್ಲಿರುವ ಪಾರ್ಕ್ ಅಭಿವೃದ್ಧಿಗೆ 11 ಲಕ್ಷ ರೂ., ಅನುದಾನ ಒದಗಿಸಲಾಗಿದೆ ಎಂದು ಟೂಡಾ ಅಧ್ಯಕ್ಷ ಬಿ.ಎಸ್.ನಾಗೇಶ್ ತಿಳಿಸಿದರು.
ಪಾರ್ಕ್ಗಳ ಸಂರಕ್ಷಣೆಗೆ ಟೂಡಾ ಆಯುಕ್ತರಿಗೆ ಜವಾಬ್ದಾರಿ ನೀಡಲಾಗಿದೆ. ಆಲದಮರ ಪಾರ್ಕ್ನಿರ್ವಹಣೆಯನ್ನು ಪ್ರೆಸ್ ಕ್ಲಬ್ಗೆ ಕೊಡಲಾಗಿದ್ದು, ಅದೇ ರೀತಿ ನಾಗರೀಕ ಸಮಿತಿಗಳು, ಎಂಎನ್ಸಿ ಕಂಪನಿಗಳು, ಕೈಗಾರಿಗಳು ಪಾರ್ಕ್ಗಳ ನಿರ್ವಹಣೆಗೆ ಮುಂದೆ ಬಂದರೆ ಅವರಿಗೆ ದತ್ತು ಕೊಡಲಾಗುತ್ತದೆ. ಮಾರುತಿನಗರದ ಸಂಜೀವಿನಿ ಪಾರ್ಕ್ ಅಭಿವೃದ್ಧಿಗೆ ಇಲ್ಲಿನ ಹಿತರಕ್ಷಣಾ ಸಮಿತಿಯೇ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಕಾರ್ಪೊರೇಟ್ ವಲಯದವರಿಂದ ಸಿಎಸ್ಆರ್ ಅನುದಾನ ಪಡೆದು ಮತ್ತಷ್ಟು ಅಭಿವೃದ್ಧಿಪಡಿಸಲಿ. > ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ