

ಕೊಪ್ಪಳ: ಮಾಸಿಕ 12 ಸಾವಿರ ರೂ. ಪ್ರೋತ್ಸಾಹಧನ ಕೊಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಂಗಳವಾರ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರೊನಾ ಸಮಯದಲ್ಲಿ ನಾವು ಜೀವದ ಹಂಗು ತೊರದು ಕೆಲಸ ಮಾಡಿದ್ದೇವೆ. ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವ ಭರವಸೆ ನೀಡಿ ಕೈಚೆಲ್ಲಿದೆ. ಆನ್‌ಲೈನ್ ಪೋರ್ಟಲ್ ಲೋಪ ದೋಷದಿಂದಾಗಿ 15 ತಿಂಗಳ ಪ್ರೋತ್ಸಾಹಧನ ಸರಿಯಾಗಿ ಕೈ ಸೇರಿಲ್ಲ. ಆದರೆ, ದಿನ ಕಳೆದಂತೆ ನಮಗೆ ಹೆಚ್ಚುವರಿ ಕಾರ್ಯಭಾರ ಹೊರಿಸಲಾಗುತ್ತಿದೆ. ರಾಜ್ಯ ಸರ್ಕಾರಿಂದ ಕೇವಲ 4 ಸಾವಿರ ರೂ. ಹಾಗೂ ಕಾರ್ಯ ಚಟುವಟಿಕೆ ಆಧರಿಸಿ ಕೇಂದ್ರದಿಂದ 5-6 ಸಾವಿರ ರೂ. ಪ್ರೋತ್ಸಾಹಧನ ಬರುತ್ತಿದೆ. ಅದೂ, ಸರಿಯಾದ ಸಮಯಕ್ಕೆ ಕೈ ಸೇರುತ್ತಿಲ್ಲವೆಂದು ಪ್ರತಿಭಟನಕಾರರು ಆರೋಪಿಸಿದರು.
ಸರ್ಕಾರ ಭರವಸೆ ನೀಡಿದಂತೆ ಮಾಸಿಕ 12 ಸಾವಿರ ರೂ. ಪ್ರೋತ್ಸಾಹಧನ ವಿತರಿಸಬೇಕು. ಮೇಲಿಂದ ಮೇಲೆ ನಮ್ಮ ಆರೋಗ್ಯ ತಪಾಸಣೆ ನಡೆಸಬೇಕು. ಮಾಸ್ಕ್, ಕೈಗವಸು, ಫೇಸ್ ಶೀಲ್ಡ್, ಸ್ಯಾನಿಟೈಸರ್ ವಿತರಿಸಬೇಕು. ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಕೋವಿಡ್ ಪ್ರೋತ್ಸಾಹಧನ 3 ಸಾವಿರ ರೂ. ತಲುಪದ ಕಾರ್ಯಕರ್ತರಿಗೆ ಹಣ ವಿತರಿಸಬೇಕು ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷ ಶರಣುಗಡ್ಡಿ, ಕಾರ್ಯದರ್ಶಿ ಕೌಶಲ್ಯ ಹಿರೇಗೌಡ್ರು, ಪದಾಧಿಕಾರಿಗಳಾದ ಲಾಲ್‌ಬೀ, ವಿಜಯಲಕ್ಷ್ಮೀ, ಶಾಂತಮ್ಮ, ಗಿರಿಜಮ್ಮ, ಪ್ರತಿಭಾ ಇತರು ಇದ್ದರು.