12 ಶಾಲೆಗಳಿಗೆ ಬಡ್ತಿ ಭಾಗ್ಯ

school
Published on

ಪ್ರಕಾಶ್ ಮಂಜೇಶ್ವರ ಮಂಗಳೂರು
ರಾಷ್ಟ್ರೀಯ ಶಿಕ್ಷಣ ನೀತಿ 2020 ಆಶಯಗಳಿಗೆ ಪೂರಕವಾಗಿ ಕೇಂದ್ರದ ಪಿಎಂ ಶ್ರೀ ಯೋಜನೆಯಡಿ ಮಾದರಿ ಶಾಲೆಗಳಾಗಿ ಬಡ್ತಿ ಪಡೆಯಲು ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಹಾಗೂ ಉಡುಪಿ ಜಿಲ್ಲೆಯ ನಾಲ್ಕು ಸೇರಿ ಒಟ್ಟು 12 ಸರ್ಕಾರಿ ಶಾಲೆಗಳು ಆಯ್ಕೆಯಾಗಿವೆ.

ಪಿಎಂ ಶ್ರೀ ಯೋಜನೆಗೆ ಆಯ್ಕೆ ಸಂದರ್ಭ ಮಕ್ಕಳು ಅಧಿಕವಿರುವ ಮತ್ತು ಉತ್ತಮ ಮೂಲ ಸೌಕರ್ಯಗಳಿರುವ ಶಾಲೆಗಳನ್ನು ಪರಿಗಣಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಮೈಸೂರು ಜಿಲ್ಲೆಗಳಿಂದ ತಲಾ 8 ರಾಜ್ಯದಲ್ಲೇ ಗರಿಷ್ಠ ಶಾಲೆಗಳು ಪ್ರಸ್ತಾವಿತ ಯೋಜನೆಯಲ್ಲಿ ಮಾದರಿ ಶಾಲೆಗಳಾಗಿ ಬಡ್ತಿ ಭಾಗ್ಯ ಪಡೆದಿವೆ. ಕರ್ನಾಟಕದ ಒಟ್ಟು 129 ಮತ್ತು ದೇಶದ 14,500 ಶಾಲೆಗಳು ಯೋಜನೆಗೆ ಆಯ್ಕೆಯಾಗಿವೆ.

ಯೋಜನೆಗೆ ಆಯ್ಕೆಯಾಗಿರುವ ಎಲ್ಲ ಶಾಲೆಗಳು ಯಾವ ರೀತಿ ಶಾಲೆಯನ್ನು ವಿದ್ಯಾರ್ಥಿ ಸ್ನೇಹಿಯಾಗಿ ಸಮಗ್ರ ಅಭಿವೃದ್ಧಿ ಮಾಡಬಹುದು ಎಂದು ಪ್ರತ್ಯೇಕ ಕ್ರಿಯಾ ಯೋಜನೆ ಸಿದ್ಧಪಡಿಸಿ ಇಲಾಖೆಯ ರಾಜ್ಯ ಕೇಂದ್ರ ಕಚೇರಿಗೆ ಕಳುಹಿಸಬೇಕು. ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿರುವ ಜಿಲಾ ಯೋಜನಾ ಸಮನ್ವಯಾಧಿಕಾರಿ ಹಾಗೂ ಡಯಟ್‌ನಿಂದ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಯೋಜನಾ ಸಮನ್ವಯಾಧಿಕಾರಿ ಕಳುಹಿಸಿದ ಕ್ರಿಯಾ ಯೋಜನೆಗೆ ಕೇಂದ್ರ ಕಚೇರಿ ಅನುಮೋದಿಸಬೇಕು. ಬಳಿಕ ಜಾರಿ.

ಏನಿದು ಯೋಜನೆ?

ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ ಯೋಜನೆ ಅನುಷ್ಠಾನ ಅವಧಿ ಐದು ವರ್ಷ. ಆಯ್ಕೆಯಾಗಿರುವ ಶಾಲೆಗಳಿಗೆ ತಲಾ 1 ಕೋಟಿ ರೂ.ನಿಂದ 1.30 ಕೋಟಿ ರೂ. ತನಕ ಅನುದಾನ ದೊರೆಯಲಿದೆ. ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ, ಕೊಠಡಿಗಳು, ಶೌಚಗೃಹ, ಅವಶ್ಯ ಪ್ರಮಾಣದ ಬೋಧನಾ ವರ್ಗ, ಆಟದ ಮೈದಾನ ಸಹಿತ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಪಿಎಂ ಶ್ರೀ ಯೋಜನೆಯಡಿ ಆಯ್ಕೆಯಾದ ಶಾಲೆಗೆ ಒದಗಿಸಲು ಅವಕಾಶವಿದೆ.

ಹತ್ತಿರದ ಶಾಲೆಗಳಿಗೂ ಪ್ರಯೋಜನ!

ಪಿಎಂ ಶ್ರೀ ಯೊಜನೆಯಲ್ಲಿ ರೂಪುಗೊಳ್ಳುವ ಮಾದರಿ ಸರ್ಕಾರಿ ಶಾಲೆಗಳಿಂದ ಹತ್ತಿರದ ಶಾಲೆಗಳಿಗೂ ಪ್ರಯೋಜನವಾಗಬೇಕು ಎನ್ನುವ ಗುರಿ ಇರಿಸಿಕೊಳ್ಳಬೇಕು. ಯೋಜನೆಯಡಿ ಅಭಿವೃದ್ಧಿಗೊಳ್ಳುವ ಶಾಲೆಗಳಲ್ಲಿ ಲಭ್ಯವಾಗುವ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ ಸೌಲಭ್ಯಗಳನ್ನು ಹತ್ತಿರದ ಸರ್ಕಾರಿ ಶಾಲೆ ಮಕ್ಕಳು ಕೂಡ ಪಡೆಯಲು ಅವಕಾಶವಿದೆ.

ಯಾವೆಲ್ಲ ಶಿಕ್ಷಣ ಸಂಸ್ಥೆಗಳು?

ದ.ಕ.ಜಿಲ್ಲೆಯಲ್ಲಿ ದಕ ಜಿಪಂ ಸರ್ಕಾರಿ ಹೈಯರ್ ಪ್ರೈಮರಿ ಶಾಲೆ ಸುರಿಬೈಲು(ಬಂಟ್ವಾಳ), ಜಿಪಂ ಸರ್ಕಾರಿ ಮಾದರಿ ಹೈಯರ್ ಪ್ರೈಮರಿ ಶಾಲೆ, ನಾಲ್ಯಪದವು (ಮಂಗಳೂರು), ಜಿಪಂ ಸರ್ಕಾರಿ ಜಿಎಚ್‌ಪಿಎಸ್ ಮಾದರಿ ಶಾಲೆ, ನೆಲ್ಯಾಡಿ (ಕಡಬ), ಜಿಪಂ ಸರ್ಕಾರಿ ಮಾದರಿ ಹೈಯರ್ ಪ್ರೈಮರಿ ಶಾಲೆ, ಗುತ್ತಿಗಾರು (ಸುಳ್ಯ), ಜಿಪಂ ಸರ್ಕಾರಿ ಮಾದರಿ ಹೈಯರ್ ಪ್ರೈಮರಿ ಶಾಲೆ, ಮೂಡುಮಾರ್ನಾಡು (ಮೂಡುಬಿದಿರೆ), ಜಿಪಂ ಸರ್ಕಾರಿ ಮಾದರಿ ಹೈಯರ್ ಪ್ರೈಮರಿ ಶಾಲೆ, ವೀರಮಂಗಲ(ಪುತ್ತೂರು), ಜಿಪಂ ಸರ್ಕಾರಿ ಮಾದರಿ ಹೈಯರ್ ಪ್ರೈಮರಿ ಶಾಲೆ, ಬಜಿರೆ (ಬೆಳ್ತಂಗಡಿ), ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಳವೂರುಮುತ್ತೂರು(ಮಂಗಳೂರು). ಉಡುಪಿ ಜಿಲ್ಲೆಯಲ್ಲಿ ಜಿಎಚ್‌ಪಿಎಸ್, ಕುಕ್ಕೆಹಳ್ಳಿ(ಉಡುಪಿ), ಜಿಎಚ್‌ಪಿಎಸ್ ತೆಕ್ಕಟ್ಟೆ (ಕುಂದಾಪುರ), ಜಿಎಚ್‌ಪಿಎಸ್ ಹೆಬ್ರಿ, ಜಿಎಚ್‌ಪಿಎಸ್ ಶಿರೂರು (ಬೈಂದೂರು) ಶಾಲೆಗಳಿಗೆ ಬಡ್ತಿ ಸಿಗಲಿದೆ.

ಪಿಎಂ ಶ್ರೀ ಯೋಜನೆಯಡಿ ಆಯ್ಕೆಯಾದ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಮಾರ್ಗದರ್ಶನದಲ್ಲಿ ಸಂಬಧಿಸಿದ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು.- ಮಂಜುಳಾ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಶಿಕ್ಷಣ ಕರ್ನಾಟಕ ಪ್ರಸ್ತಾವಿತ ಯೋಜನೆಯಿಂದ ಆಯ್ಕೆಯಾದ ಶಾಲೆಗಳ ಅಭ್ಯುದಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಇದರೊಂದಿಗೆ ಇತರ ಸರ್ಕಾರಿ ಶಾಲೆಗಳು ಕೂಡ ಪ್ರೇರಣೆ ಪಡೆಯಲಿವೆ.- ಗಣಪತಿ ಡಿಡಿಪಿಐ, ಉಡುಪಿ https://www.vijayavani.net/people-stand-in-queue-to-admitt-their-kids-to-government-school

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net