

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಪಂಚಶಕ್ತಿ ಸಹಕಾರಿ ಅಧೀನದಲ್ಲಿರುವ ಸ್ವಸಹಾಯ ಗುಂಪಿನ ಸದಸ್ಯರು ಮೃತಪಟ್ಟಲ್ಲಿ ಅವರ ಕುಟುಂಬ ಹಾಗೂ ಗುಂಪಿನ ಇತರ ಸದಸ್ಯರಿಗೆ ಹೊರೆಯಾಗದ ರೀತಿಯಲ್ಲಿ ಅವರ ಉಳಿದಿರುವ ಸಾಲದ ಮೊತ್ತವನ್ನು ಸಹಕಾರಿ ಸಂಘವೇ ಭರಿಸಲಿದೆ ಎಂದು ಸಹಕಾರಿಯ ಮಹಾಸಭೆಯಲ್ಲಿ ಘೋಷಿಸಲಾಯಿತು.
ಅಧ್ಯಕ್ಷ ರಂಜಿತ್ ಪೂಜಾರಿ ಅಧ್ಯಕ್ಷತೆಯಲ್ಲಿ ಸಮಾಜಮಂದಿರದಲ್ಲಿ ನಡೆದ 2023-24ನೇ ಸಾಲಿನ ಮಹಾಸಭೆಯಲ್ಲಿ ಸಹಕಾರಿಯ ಅಭಿವೃದ್ಧಿ, ಸದಸ್ಯರಿಗೆ, ಗುಂಪುಗಳ ಸದಸ್ಯರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.
ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಣೆ, 80 ಲಕ್ಷ ರೂ. ವೆಚ್ಚದಲ್ಲಿ ನೂತನ ಕಾರ್ಯಾಲಯ ಖರೀದಿ ಕುರಿತು ತಿಳಿಸಲಾಯಿತು. ಕಳೆದ ಸಾಲಿನಲ್ಲಿ 35ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ ನೆರವು, ಕಳೆದ ನಾಲ್ಕು ವರ್ಷಗಳಲ್ಲಿ 120 ಕುಟುಂಬಗಳಿಗೆ ನೆರವು ನೀಡಿರುವ ಕುರಿತು ಸಭೆಯ ಗಮನಕ್ಕೆ ತರಲಾಯಿತು.
ಉಪಾಧ್ಯಕ್ಷ ಶಂಕರನಾರಾಯಣ ಭಟ್, ನಿರ್ದೇಶಕರಾದ ಸುರೇಶ್ ಪೂಜಾರಿ ಎಂ., ಗೋಪಾಲ ಶೆಟ್ಟಿಗಾರ, ರಮೇಶ್ ಎಸ್.ಶೆಟ್ಟಿ, ರಾಜೇಂದ್ರ ಬಿ., ಶರತ್ ಜೆ.ಶೆಟ್ಟಿ, ಉಷಾ, ರವೀಂದ್ರ ಕರ್ಕೇರ, ರತ್ನಾಕರ ಪೂಜಾರಿ, ನಾಗೇಶ್ ನಾಯ್ಕ, ಮೀನಾಕ್ಷಿ ಎಸ್. ಅಂಚನ್ ಉಪಸ್ಥಿತರಿದ್ದರು.
ಕಳೆದ ಸಾಲಿನಲ್ಲಿ 1 ಕೋಟಿ ರೂ. ಅಧಿಕ ನಿತ್ಯನಿಧಿ ಸಂಗ್ರಹಿಸಿದ ದಿನೇಶ್ ಪೂಜಾರಿ, ಸಹಕಾರಿಯ ಉತ್ತಮ ಗ್ರಾಹಕರಾದ ವಿಜಯ ಕುಮಾರ್ ಹೆಗ್ಡೆ, ಸುಧೀರ್, ರಾಕೇಶ್, ವಿಲ್ರೆಡ್ ಡಿಸೋಜ, ನಾಸಿರ್ ಖಾನ್, ಬೊಗ್ರಾಡಿ ಮೊಹಿದ್ದಿನ್ ಅಬ್ದುಲ್ಲ ಅವರನ್ನು ಸನ್ಮಾನಿಸಲಾಯಿತು. ಉತ್ತಮ ಸ್ವಸಹಾಯ ಗುಂಪುಗಳನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಆರ್ ಮಧ್ಯಸ್ಥ ವಾರ್ಷಿಕ ವರದಿ ಮಂಡಿಸಿದರು. ಸಿಬ್ಬಂದಿ ಗಣೇಶ್ ಆರ್.ನಾಯ್ಕ ಪರಿಶೋಧಿತ ಲೆಕ್ಕ ಪತ್ರ ಮಂಡಿಸಿದರು. ಸ್ವಾತಿ ಶೆಟ್ಟಿ ಬಜೆಟ್‌ಗಿಂತ ಜಾಸ್ತಿ ಖರ್ಚಾದ ಐವೇಜಿಗೆ ಮಂಜೂರಾತಿ ಕೇಳಿದರು. ಪ್ರತಿಭಾ ಮುಂದಿನ ಸಾಲಿನ ಬಜೆಟ್ ಮಂಡಿಸಿದರು. ಸಿಬ್ಬಂದಿ ರೇಖಾ ಎ+ ಬಂದ ಸ್ವಸಹಾಯ ತಂಡದ ಮಾಹಿತಿ ನೀಡಿದರು.