ಬ್ಯಾಡಗಿಗೆ 12 ಹೊಸ ಬಸ್ ಬಿಡುಗಡೆ

BYD BUS
Published on

ಬ್ಯಾಡಗಿ: ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ ಹೊಸ ಬಸ್​ಗಳನ್ನು ಮಂಜೂರು ಮಾಡಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಹೊಸದಾಗಿ ಮಂಜೂರಾದ ನೂತನ ಮಾರ್ಗದ ಬಸ್​ಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಬಡವರು, ಕೂಲಿಕಾರರು ಸೇರಿ ಮಧ್ಯಮ ವರ್ಗದ ಮಹಿಳೆಯರಿಗೆ ಶಕ್ತಿ ಯೋಜನೆಯ ಉಚಿತ ಸಾರಿಗೆ ಸಹಕಾರಿಯಾಗಿದೆ. ಇದು ಸಾರಿಗೆ ನೌಕರರಿಗೂ ಅನುಕೂಲವಾಗಿದ್ದು, ಸಿಬ್ಬಂದಿ ಹಿತ ಕಾಪಾಡಿದೆ. ಉಚಿತ ಪ್ರಯಾಣದ ಮೊತ್ತವನ್ನು ಸರ್ಕಾರ ಸಾರಿಗೆ ಸಂಸ್ಥೆಗಳಿಗೆ ಭರಿಸುತ್ತಿದೆ ಎಂದರು.

ಸುಬ್ರಮಣ್ಯ ಕ್ಷೇತ್ರಕ್ಕೆ ಸಂಚಾರ:

ಬ್ಯಾಡಗಿ ಸಾರಿಗೆ ಘಟಕದಿಂದ ಶಿವಮೊಗ್ಗ, ಧರ್ಮಸ್ಥಳ, ಸುಬ್ರಮಣ್ಯ ಕ್ಷೇತ್ರಗಳಿಗೆ ಭಕ್ತರು ಹೋಗಿ ಬರಲು ಅನುಕೂಲವಾಗಲೆಂದು ಸಿಎಂ ಹಾಗೂ ಸಾರಿಗೆ ಸಚಿವರಿಗೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅವರು, ಬ್ಯಾಡಗಿಗೆ 12 ಹೊಸ ಬಸ್​ಗಳನ್ನು ನೀಡಿದ್ದಾರೆ. ಈ ಪೈಕಿ ಮೂರು ಬಸ್​ಗಳನ್ನು ಬ್ಯಾಡಗಿ- ಧರ್ಮಸ್ಥಳ ಹಾಗೂ ಸುಬ್ರಮಣ್ಯ ಕ್ಷೇತ್ರಗಳಿಗೆ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಹಾಗೂ ಪ್ರತಿದಿನ ರಾತ್ರಿ 9 ಗಂಟೆಗೆ ಬ್ಯಾಡಗಿಯಿಂದ ಬೆಂಗಳೂರಿಗೆ ಬಸ್ ಓಡಿಸಲಾಗುತ್ತಿದೆ. ಇನ್ನುಳಿದ ಬಸ್​ಗಳನ್ನು ಹಳೆಯ ಮಾರ್ಗಗಳಲ್ಲಿ ಓಡಿಸುವ ಮೂಲಕ ಪ್ರಯಾಣಕ್ಕೆ ಇನ್ನಷ್ಟು ಅನುಕೂಲ ಕಲ್ಪಿಸಲಿದ್ದೇವೆ ಎಂದರು.

ಶೀಘ್ರದಲ್ಲಿ ಹೊಸ ಬಸ್ ನಿಲ್ದಾಣ:

ಕಾಕೋಳ ರಸ್ತೆಯ ತಾಲೂಕು ಪಂಚಾಯಿತಿ ಬಳಿ 10 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ವಣಕ್ಕೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಶೀಘ್ರ ಮಂಜೂರಾತಿ ಆದೇಶವೂ ಲಭ್ಯವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬ್ಯಾಡಗಿ ಬಸ್​ಗಳನ್ನು ಓಡಿಸಲು ಹಾಗೂ ರೈಲು ಪ್ರಯಾಣಕ್ಕೂ ಇದು ಅನುಕೂಲವಾಗಲಿದೆ. ಹೈಟೆಕ್ ಮಾದರಿಯಲ್ಲಿ ಹೊಸ ಬಸ್ ನಿಲ್ದಾಣ ಕಾಮಗಾರಿ ಆರಂಭಿಸಲು ನೀಲನಕ್ಷೆ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದರು.

ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಶಿವನಗೌಡ್ರ ಪಾಟೀಲ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಶಿವರಾಜ ಅಂಗಡಿ, ಸರೋಜಾ ಉಳ್ಳಾಗಡ್ಡಿ, ಮಂಜುನಾಥ ಬೋವಿ, ರಾಜಣ್ಣ ಕಳ್ಯಾಳ, ಆಶ್ರಯ ಸಮಿತಿ ಅಧ್ಯಕ್ಷ ಮುನಾಫಸಾಬ್ ಎರೆಸೀಮೆ, ಸದಸ್ಯರಾದ ದುರ್ಗೆಶ ಗೋಣೆಮ್ಮನವರ, ಗಿರೀಶ ಇಂಡಿಮಠ, ಮಜೀದ್ ಮುಲ್ಲಾ, ಡಾ.ಎ.ಜೆ. ಸೌದಾಗರ, ದಾನಪ್ಪ ಚೂರಿ, ಶಂಭು ಪಾಟೀಲ, ಸಾರಿಗೆ ವ್ಯವಸ್ಥಾಪಕ ಆರ್.ಸಿ. ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net