ಹಸಿರೀಕರಣಕ್ಕಾಗಿ 12 ದಟ್ಟಾರಣ್ಯ ನಿರ್ಮಾಣ!

IMG-20250410-WA0009.jpg
Published on

ಜಗದೀಶ ಹೊಂಬಳಿ ಬೆಳಗಾವಿ

ಕಾಡು ನಾಶವಾಗಿ ಜನವಸತಿ ಪ್ರದೇಶಗಳು ನಿರ್ಮಾಣವಾಗುತ್ತಿರುವ ಇಂದಿನ ಆಧುನಿಕ ದಿನಗಳಲ್ಲಿ ಪರಿಸರ ಸಂರಕ್ಷಣೆಗೆ ನಗರದ ಅನಗೋಳದ ಗ್ರೀನ್ ಸೇವಿಯರ್ಸ್ ಅಸೋಸಿಯೇಶನ್ ಮುಂದಡಿ ಇಟ್ಟಿದ್ದು, ಈಗಾಲೇ 12 ದಟ್ಟಾರಣ್ಯಗಳನ್ನು ನಿರ್ಮಿಸಿ ಹಸಿರೀಕರಣಕ್ಕೆ ಮುನ್ನುಡಿ ಬರೆದಿದೆ.

ಹೊಸ ಬಡಾವಣೆ ಹಾಗೂ ಖಾಲಿ ಸೈಟ್‌ಗಳಲ್ಲಿ ಸಸಿ ನೆಡುವ ಹೊಸ ಉಪಕ್ರಮ ಕೈಗೊಂಡಿದೆ. ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣ ಕಾಂಪೌಂಡ್ ಕ್ವಾಟರ್ಸ್‌ನಲ್ಲಿ ಸುಮಾರು 10 ಸಾವಿರ ಸಸಿ ನೆಟ್ಟಿದೆ. 2025ರ ಅಂತ್ಯಕ್ಕೆ ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ 10 ಲಕ್ಷ ಸಸಿ ನೆಡುವ ಗುರಿ ಹೊಂದಿದೆ. ಹಲವು ವರ್ಷದಿಂದ ಕಾರ್ಯಾರಂಭವಾಗಿರುವ ಈ ಅಸೋಸಿಯೇಶನ್ ಇಲ್ಲಿಯವರೆಗೆ 65 ಸಾವಿರ ಸಸಿ ನೆಟ್ಟಿದೆ. ಸಸಿ ನೆಟ್ಟು ಅವುಗಳಿಗೆ ನೀರು, ಪೋಷಕಾಂಶ ಹಾಕಿ ಬೆಳೆಸುವ ಹೊಣೆ ಹೊತ್ತಿದೆ.

ಸಣ್ಣ ಕಾಡು ನಿರ್ಮಾಣದ ಪರಿಕಲ್ಪನೆ:

ಈಗಾಗಲೇ ಮಚ್ಚೆ ಬಳಿಯ ವಾಗೋಡೆಯಲ್ಲಿ 1 ಸಾವಿರ ಸಸಿ ನೆಟ್ಟು ಕಾಡು ಬೆಳೆಸಿದೆ. ಸಂತಿ ಬಸ್ತವಾಡದಲ್ಲಿ 4 ಸಾವಿರ ಸಸಿ, ರಾಜಗೋಳಿಯಲ್ಲಿ 1 ಸಾವಿರ ಸಸಿ ನೆಟ್ಟಿರುವುದು ಸೇರಿ 12 ಕಡೆಗಳಲ್ಲಿ ದಟ್ಟಾರಣ್ಯ ನಿರ್ಮಿಸಿದೆ. ಬೆಳಗಾವಿ ಲೋಕೋಪಯೋಗಿ ಇಲಾಖೆ ಆವರಣದಲ್ಲಿ 800 ಸಸಿಗಳನ್ನು ನೆಟ್ಟಿದ್ದು, ಹಲವು ಕಡೆಗಳಲ್ಲಿ 10 ಸಾವಿರ ಸಸಿಗಳ ಸಣ್ಣ ಕಾಡು ನಿರ್ಮಿಸಲಾಗಿದೆ. ಮುಂಬರುವ ದಿನಗಳಲ್ಲಿ ಪಶ್ಚಿಮ ಘಟ್ಟಗಳ 30 ಹಳ್ಳಿಗಳಲ್ಲಿ 10 ಲಕ್ಷ ಸಸಿಗಳನ್ನು ನೆಡುವ ಗುರಿ ಅಸೋಸಿಯೇಶನ್ ಹಾಕಿಕೊಂಡಿದೆ.

ಸಂಘ-ಸಂಸ್ಥೆಗಳು ಭಾಗಿ:

ಗ್ರೀನ್ ಸೇವಿಯರ್ಸ್ ಅಸೋಸಿಯೇಶನ್‌ನಲ್ಲಿ 50 ಜನ ಸದಸ್ಯರಿದ್ದಾರೆ. ಇವರೊಂದಿಗೆ ಬೆಳಗಾವಿ ನಗರದಲ್ಲಿ ಸಸಿ ನೆಡುವ ಕಾರ್ಯದಲ್ಲಿ ಭರತೇಶ ಬಿಬಿಎ ಮತ್ತು ಬಿಕಾಂ ಕಾಲೇಜುಗಳ ವಿದ್ಯಾರ್ಥಿಗಳು, ರಾಜಸ್ಥಾನ ಯುವ ಮಂಚ್, ರೋಟರಿ ಕ್ಲಬ್ ಆಫ್ ವೇಣುಗ್ರಾಮ, ಆಪ್ಟೆಕ್ ಏವಿಯೇಶನ್ ಇನ್ಸ್ಟಿಟ್ಯೂಟ್, ಆಪರೇಶನ್ ಮದತ್ ಮತ್ತು ಬೆಳಗಾವಿ ವಿಮಾನ ನಿಲ್ದಾಣದ ಸ್ವಯಂ ಸೇವಕರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಹಾಗೂ ಹಿಡಕಲ್ ಸಾಯಿ ನರ್ಸರಿಯಿಂದ ಸಸಿಗಳನ್ನು ಪಡೆದು ಪರಿಸರ ಬೆಳೆಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.

ಪ್ರತಿಮನೆಗೆ ಸಸಿ ನೀಡುವ ಯೋಜನೆ:

ಈ ವರ್ಷ ಗ್ರೀನ್ ಸೇವಿಯರ್ಸ್ ಅಸೋಸಿಯೇಶನ್ ನಗರದ ಪ್ರತಿಮನೆಗೆ ಸಸಿ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಏ.10ರಂದು ಅನಗೋಳದಿಂದ ಸಸಿ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಸೋಸಿಯೇಶನ್‌ನಿಂದ ಅರಣ್ಯ ಆಧಾರಿತ ಕೃಷಿ ಪರಿಕಲ್ಪನೆ ಯೋಜನೆ ರೂಪಿಸಲಾಗಿದೆ. ಸಾವಯವ ಪದ್ಧತಿಯಲ್ಲಿ 40 ವಿಧದ ಹಣ್ಣಿನ ಸಸಿ ಹಾಗೂ ತರಕಾರಿ ಬೆಳೆ ಬೆಳೆಯುವುದಕ್ಕೆ ಚಿಂತಿಸಲಾಗಿದೆ. ಶಾಲೆ, ದೇವಸ್ಥಾನ ಆವರಣದಲ್ಲೂ ಸಸಿ ನಾಟಿ ಮಾಡಲಾಗುತ್ತಿದೆ.

ಪರಿಸರ ಸಂರಕ್ಷಿಸುವ ದೃಷ್ಟಿಯಿಂದ ಯಾವ ಫಲಾಪೇಕ್ಷೆ ಇಲ್ಲದೇ ಸಸಿ ನಾಟಿ ಮಾಡುತ್ತಿದ್ದೇವೆ. ಈವರೆಗೆ 65 ಸಾವಿರ ಸಸಿಗಳನ್ನು ನಾಟಿ ಮಾಡಿದ್ದೇವೆ. 12 ದಟ್ಟಾರಣ್ಯಗಳನ್ನು ನಿರ್ಮಿಸಿದ್ದೇವೆ. ಪರಿಸರ ಸಂರಕ್ಷಣೆ ಕುರಿತಾಗಿ ಈವರೆಗೆ 140 ಕಡೆಗಳಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ಈ ವರ್ಷ ಪ್ರತಿಮನೆಗೆ ಸಸಿ ಕೊಡುವ ಯೋಜನೆ ಮಾಡಿದ್ದೇವೆ ಎಂದು ಗ್ರೀನ್ ಸೇವಿಯರ್ಸ್ ಅಸೋಸಿಯೇಶನ್ ಸಂಸ್ಥಾಪಕ ಸಮೀರ್ ಮಜಲಿ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net