

ಬ್ಯಾಡಗಿ: ಪಟ್ಟಣದ ಎಸ್ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ನ. 13ರಿಂದ 24ರವರೆಗೆ 12 ದಿನಗಳ ಕಾಲ ಪ್ರತಿದಿನ ಸಂಜೆ 6ರಿಂದ 7ರವರೆಗೆ ಖ್ಯಾತ ಪ್ರವಚನಕಾರರಾದ ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನ ಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಂದ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದು ಪ್ರವಚನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.
13ರಂದು ಸಂಜೆ 6 ಗಂಟೆಗೆ ಪ್ರವಚನ ಕಾರ್ಯಕ್ರಮ ಉದ್ಘಾಟನೆ ಜರುಗಲಿದೆ. ಸಭಾ ಕಾರ್ಯಕ್ರಮದಲ್ಲಿ ಹೂವಿನಹಡಗಲಿಯ ಶ್ರೀ ಡಾ.ಹಿರಿಶಾಂತ ಸ್ವಾಮೀಜಿ, ಕಣ್ವಕುಪ್ಪಿ ಮಠದ ಶ್ರೀ ಡಾ. ನಾಲ್ವಡಿ ಶಾಂತಲಿಂಗ ಸ್ವಾಮೀಜಿ, ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಶ್ರೀ ಮಹಾಂತ ಸ್ವಾಮೀಜಿ, ಅಕ್ಕಿಆಲೂರಿನ ಶ್ರೀ ಶಿವಬಸವ ಸ್ವಾಮೀಜಿ, ನೆಗಳೂರು ಹಿರೇಮಠದ ಶ್ರೀ ಶಾಂತವೀರ ಸ್ವಾಮೀಜಿ, ಕೂಡಲಮಠದ ಶ್ರೀ ಗುರುಮಹೇಶ್ವರ ಸ್ವಾಮೀಜಿ, ಲಿಂಗನಾಯಕನಹಳ್ಳಿ ಜಂಗಮಕ್ಷೇತ್ರದ ಶ್ರೀ ಚನ್ನವೀರ ಸ್ವಾಮೀಜಿ, ಬ್ಯಾಡಗಿ ಮುಪ್ಪಿನೇಶ್ವರ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು ಸಾನ್ನಿಧ್ಯ ವಹಿಸುವರು.
ಪ್ರತಿದಿನ ಬೆಳಗ್ಗೆ 6.30 ಗಂಟೆಗೆ ಕೊಪ್ಪಳದ ಶ್ರೀಗಳ ನೇತೃತ್ವದಲ್ಲಿ ಪಟ್ಟಣದ ವಿವಿಧ ಬಡಾವಣೆ ಹಾಗೂ ಗ್ರಾಮಗಳಲ್ಲಿ ಸದ್ಭಾವನಾ ಪಾದಯಾತ್ರೆ ಜರುಗಲಿದೆ. 14ರಂದು ಬ್ಯಾಡಗಿ ನಗರದ ಚಂದ್ರಗುತ್ತೆಮ್ಮದೇವಿ ದೇವಸ್ಥಾನದಿಂದ ಸದ್ಭಾವನಾ ಪಾದಯಾತ್ರೆ ಪ್ರಾರಂಭವಾಗಿ ಮದಗಮ್ಮನ ದೇವಸ್ಥಾನ, ತಳವಾರ ಓಣಿ, ಹೊಂಡದ ಓಣಿ, ಸೋಗಿನ ಓಣಿ, ಪೋಸ್ಟ ಆಪೀಸ್ ರಸ್ತೆ ಮೂಲಕ ವಾಜಪೇಯಿ ರಂಗಮಂದಿರದಲ್ಲಿ ಮುಕ್ತಾಯವಾಗಲಿದೆ. 15ರಂದು ಬಸವೇಶ್ವರ ಮೂರ್ತಿಯಿಂದ ಸಂಗಮೇಶ್ವರ ನಗರ, ಅಗಸನಹಳ್ಳಿ ದರ್ಗಾ ಪ್ಲಾಟ್ ಮೂಲಕ ಅಗಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಕ್ತಾಯ.
16 ರಂದು ಇಲ್ಲಿನ ಸ್ವಾತಂತ್ರ್ಯ ಯೋಧರ ಭವನದಿಂದ ಪಾದಯಾತ್ರೆ ಆರಂಭವಾಗಿ ಸುಭಾಸ ನಗರ ಒಳಬಾಗದ ಮೂಲಕ ತೆರಳಿ ನೆಹರು ನಗರದ ದಾನಮ್ಮ ದೇವಿ ದೇವಸ್ಥಾನದಲ್ಲಿ ಮುಕ್ತಾಯ. 17ರಂದು ವಿದ್ಯಾನಗರ ಪಂಚಲಿಂಗೇಶ್ವರ ದೇವಸ್ಥಾನದಿಂದ ಬೆಟ್ಟದ ಮಲ್ಲೇಶ್ವರ ಮಾರ್ಗವಾಗಿ ಶನೀಶ್ವರ ದೇವಸ್ಥಾನ ಎದುರಿನಿಂದ ಬಿಇಎಸ್ ಕಾಲೇಜ್ ಆವರಣದಲ್ಲಿ ಮುಕ್ತಾಯವಾಗಲಿದೆ. 18 ರಂದು ಕಲ್ಲೆದೇವರು, 19 ಮಲ್ಲೂರು, 20 ಬಿಸಲಹಳ್ಳಿ, 21 ಬುಡಪನಹಳ್ಳಿ, 22ರಂದು ಮಾಸಣಗಿ, 23ರಂದು ಕದರಮಂಡಲಗಿ ಗ್ರಾಮದಲ್ಲಿ ಪಾದಯಾತ್ರೆ ಜರುಗಲಿದೆ. ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಶ್ರೀಗಳ ಪ್ರವಚನ ಆಲಿಸುವ ಮೂಲಕ ಧಾರ್ವಿುಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
20 ಸಾವಿರ ಭಕ್ತರ ಆಗಮನ ನಿರೀಕ್ಷೆ: ಪಟ್ಟಣದ ಎಸ್ಜೆಜೆಎಂಸ್ ಕ್ರೀಡಾಂಗಣದ ಸುಮಾರು 7 ಎಕರೆ ಪ್ರದೇಶ ಸ್ವಚ್ಛಗೊಳಿಸಿ ಸುಣ್ಣಬಣ್ಣಗಳಿಂದ ಅಲಂಕರಿಸಲಾಗಿದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಕುಳಿತುಕೊಳ್ಳಲು ತಾಡಪಾಲು ಹಾಕಲಾಗಿದೆ. ಹಿರಿಜೀವಿಗಳಿಗೆ ಪ್ರತ್ಯೇಕ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಸುತ್ತಲಿನ ಎಲ್ಲೆಡೆ ಬೆಳಕಿನ ವ್ಯವಸ್ಥೆ ಹಾಗೂ ದೊಡ್ಡ ಪ್ರಮಾಣದಲ್ಲಿ ಧ್ವನಿವರ್ಧಕ ಅಳವಡಿಸಲಾಗಿದೆ. ದಕ್ಷಿಣೋತ್ತರವಾಗಿ ನಿರ್ವಿುಸಿದ ವೇದಿಕೆಯಲ್ಲಿ ಶ್ರೀಗಳಿಗೆ ಎತ್ತರದ ಆಸನದ ವ್ಯವಸ್ಥೆ ಮಾಡಲಾಗಿದೆ.
ವಾಹನಗಳ ಮಾರ್ಗ ಬದಲಾವಣೆ: 12 ದಿನ ಪ್ರವಚನದ ನಿಮಿತ್ತ ಇಲ್ಲಿನ ಗುತ್ತೆಮ್ಮದೇವಿ ದ್ವಾರಬಾಗಿಲು ರಟ್ಟಿಹಳ್ಳಿ ರಸ್ತೆಯ ವಿದ್ಯಾನಗರ ಬಿಇಎಸ್ ಕಾಲೇಜ್ವರೆಗೆ ಹಾಗೂ ಚಿಕ್ಕನಕಟ್ಟೆಹತ್ತಿರ ದೊಡ್ಡ ನೀರಿನ ಟ್ಯಾಂಕ್ನಿಂದ ಕನಕದಾಸ ಕಲಾಭವನ ಮಾರ್ಗವಾಗಿ ತೆರಳಿ ಸರ್ಕಾರಿ ಆಸ್ಪತ್ರೆ ಹಿಂಬಾಗದ ಹಂಸಭಾವಿ ರಸ್ತೆ ಕೂಡುವ ರಸ್ತೆಗಳಲ್ಲಿ ಓಡಾಡುವ ಎಲ್ಲ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಸದರಿ ಮಾರ್ಗದ ಬದಲಾಗಿ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಎನ್ಬಿಬಿ ಶಾಲೆ ಹಾಗೂ ಬಿಇಎಸ್ ಕಾಲೇಜ್ ಆವರಣ, ಅಗ್ನಿಶಾಮಕ ರಸ್ತೆ, ಎಪಿಎಂಸಿ ಆವರಣ, ಅಗಸನಹಳ್ಳಿ ಪೆಟ್ರೋಲ್ ಬಂಕ್ ಎದುರು ವಾಹನಗಳಿಗೆ ರ್ಪಾಂಗ್ ವ್ಯವಸ್ಥೆ ಮಾಡಲಾಗಿದೆ.