ಎಕ್ಸ್​ಪ್ರೆಸ್ ರೈಲು ಡಿಕ್ಕಿಯಾಗಿ 12 ಹಸುಗಳು ಸಾವು!, ಪೈಲೆಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

24ANG3- Railway
Published on

ಅಣ್ಣಿಗೇರಿ: ಪಟ್ಟಣದ 12 ಬಸವಿ ದನಗಳು ಸೋಮವಾರ ತಡರಾತ್ರಿ ರೈಲಿಗೆ ಸಿಲುಕಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.

ಅಣ್ಣಿಗೇರಿ- ನವಲಗುಂದ ರಸ್ತೆಯ ಎಲ್​ಸಿ 18ರ ಗೇಟಿನಲ್ಲಿ ಸೋಮವಾರ ರಾತ್ರಿ 11.36ಕ್ಕೆ 16536 ಸಂಖ್ಯೆಯ ಗೋಲಗುಂಬಜ್-ಸೋಲ್ಲಾಪುರ- ಮೈಸೂರ ಎಕ್ಸ್​ಪ್ರೆಸ್ ರೈಲು ಅತಿ ವೇಗವಾಗಿ ಬಂದು ಅಫ್​ಲೈನ್​ನಲ್ಲಿ ನಿಂತ ಹಸುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಹಸುಗಳ ಸಾವನ್ನಪ್ಪಿವೆ.

ಬೆಳಗಿನ ಜಾವ ಸುದ್ದಿ ತಿಳಿಯುತ್ತಿದ್ದಂತೆ ನವಲಗುಂದ ರೈಲ್ವೇ ಗೇಟಿನ ಮುಂಭಾಗದಲ್ಲಿ ಬಜರಂಗ ದಳದ ಕಾರ್ಯಕರ್ತರು ಹಾಗೂ ಸಾವಿರಾರು ಜನರ ಜತೆ ರೈಲ್ವೆ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡರು.

ತುಂಬು ಗರ್ಭಿಣಿ ಹಸು ಛಿದ್ರ: 12 ಹಸುಗಳಲ್ಲಿ ತುಂಬು ಗರ್ಭಿಣಿ ಹಸುಯೊಂದಕ್ಕೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅದರ ಹೊಟ್ಟೆಯಲ್ಲಿದ್ದ ಕರುವೂ ಹೊರಬಂದಿದ್ದನ್ನು ಕಂಡು ಜನರು ಕಣ್ಣೀರು ಸುರಿಸಿದರು.

ಅಣ್ಣಿಗೇರಿ ಪುರಸಭೆ ಆಡಳಿತದ ವತಿಯಿಂದ ಮಂಗಳವಾರ ಪುರಸಭೆ ಪೌರ ಕಾರ್ವಿುಕರ ಸಮ್ಮುಖದಲ್ಲಿ ಬಜರಂಗ ದಳದ ಕಾರ್ಯಕರ್ತರು ಹಸುಗಳನ್ನು ಕ್ರೇನ್ ಮೂಲಕ ಟ್ರ್ಯಾಕ್ಟರ್​ನಲ್ಲಿ ವರ್ಗಾಯಿಸಿದರು. ನಂತರ ಅಣ್ಣಿಗೇರಿಯ ಹಳ್ಳಿಕೇರಿ ರಸ್ತೆಯಲ್ಲಿರುವ ಕಸ ವಿಲೇವಾರಿ ಘಟಕದ ಪಕ್ಕದಲ್ಲಿ ಆಕಳುಗಳಿಗೆ ಹಿಂದು ಧಾರ್ವಿುಕ ವಿಧಿ - ವಿಧಾನಗಳ ಪ್ರಕಾರ ಬಜರಂಗ ದಳದ ಕಾರ್ಯಕರ್ತರು ಪೂಜೆ ಸಲ್ಲಿಸಿ ಅಂತ್ಯಕ್ರಿಯೇ ನೆರವೇರಿಸಿದರು.

ಎಕ್ಸ್​ಪ್ರೆಸ್ ರೈಲು ಸುಮಾರು 100 ಕಿ.ಮೀ. ವೇಗದಲ್ಲಿ ಇರುತ್ತದೆ. ಅಣ್ಣಿಗೇರಿ ಆಫ್​ಲೈನ್ ಬಳಿ ಘಟನೆ ಆದ್ದರಿಂದ ಭಾರಿ ದುರಂತ ತಪ್ಪಿದಂತಾಗಿದೆ. ಪೈಲೆಟ್ ಏನಾದರು ರೈಲು ನಿಲ್ಲಿಸುವ ಯೋಚನೆ ಮಾಡಿದ್ದರೆ ರೈಲು ಹಳಿ ತಪ್ಪಿ ಡೊಡ್ಡ ಅನಾಹುತವೇ ಸಂಭವಿಸುತ್ತಿತ್ತು . | ನಫಿಕ್ ಅಲಸಂ, ಅಣ್ಣಿಗೇರಿ ಸ್ಟೇಷನ್ ಮಾಸ್ಟರ್

ರೈಲ್ವೆ ಇಲಾಖೆ ನಿರ್ಲಕ್ಷದಿಂದಾಗಿ ಈ ಘಟನೆ ಸಂಭವಿಸಿದೆ. ಸ್ವತಃ ನಾವೇ ಸಿಆರ್​ಪಿಎಫ್ ಅಧಿಕಾರಿಗಳಿಗೆ ಕರೆ ಮಾಡಿ ಹೇಳಿದರು. ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಅಲ್ಲಿದ್ದ ಗೇಟಮನ್ ಹೊಣೆ.  | ಭರತೇಶ ಜೈನ್, ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯದರ್ಶಿ, ಅಣ್ಣಿಗೇರಿ- ನವಲಗುಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net