

ಮಂಗಳೂರು: ದ.ಕ ಜಿಲ್ಲೆಯಲ್ಲಿ ಇದುವರೆಗೆ ಹೊರದೇಶ/ರಾಜ್ಯಗಳಿಂದ ಬಂದವರಿಗಷ್ಟೇ ತಗಲುತ್ತಿದ್ದ ಕರೊನಾ ಈಗ ಪ್ರಥಮ ಹಾಗೂ ದ್ವಿತೀಯ ಹಂತದ ಲಕ್ಷಣಗಳನ್ನು ತೋರಿಸತೊಡಗಿದೆ.
ಬುಧವಾರ 12 ಮಂದಿ ಕರೊನಾ ಪಾಸಿಟಿವ್ ಆಗಿದ್ದಾರೆ. 12 ಮಂದಿಯಲ್ಲಿ ನಾಲ್ಕು ಮಂದಿ ಶಾರ್ಜಾದಿಂದ ಮರಳಿದವರು. ಒಬ್ಬರು ತೀವ್ರ ಉಸಿರಾಟ ತೊಂದರೆ ಹಾಗೂ 7 ಮಂದಿ ಇನ್‌ಫ್ಲುಯೆಂಜಾ ಮಾದರಿಯ ತೊಂದರೆ ಲಕ್ಷಣಗಳೊಂದಿಗೆ ಕರೊನಾ ಪಾಸಿಟಿವ್ ಆಗಿದ್ದಾರೆ.
ಮಂಗಳೂರಿನ ಒಂದೇ ಕುಟುಂಬದ 71 ವರ್ಷ, 50 ವರ್ಷ ಹಾಗೂ 47 ವರ್ಷ ವಯಸ್ಸಿನ ಪುರುಷರಲ್ಲಿ ಐಎಲ್‌ಐ(ಇನ್‌ಫ್ಲುಯೆಂಜಾ ಮಾದರಿ ತೊಂದರೆ) ಕಾಣಿಸಿದ್ದು ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟಿದೆ. ಇನ್ನೋರ್ವ ಮಂಗಳೂರು ನಿವಾಸಿ 59ರ ಪುರುಷ ತೀವ್ರ ಉಸಿರಾಟ ತೊಂದರೆ ಲಕ್ಷಣಗಳೊಂದಿಗೆ ಕೋವಿಡ್ ಪಾಸಿಟಿವ್ ಆಗಿದ್ದಾರೆ.
ಇನ್ನೊಂದು ಕುಟುಂಬದಲ್ಲಿ 58ರ ಗಂಡಸು, 25ರ ಯುವಕ ಹಾಗೂ 26ವರ್ಷದ ಮಹಿಳೆಯಲ್ಲೂ ಐಎಲ್‌ಐ ಲಕ್ಷಣಗಳಿದ್ದು ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಪುತ್ತೂರು ನಿವಾಸಿ 42 ವರ್ಷದ ಗಂಡಸಿಗೂ ಐಎಲ್‌ಐ ಜೊತೆ ಕರೊನಾ ತಗಲಿದೆ. ಐಎಲ್‌ಐ ಪ್ರಕರಣಗಳೆಲ್ಲದಕ್ಕೂ ಸಂಪರ್ಕದ ವಿವರ ಇಲಾಖೆಗೆ ಲಭ್ಯವಾಗಿದೆ.ಶಾರ್ಜಾದಿಂದ ಜೂನ್ 21ರಂದು ಬಂದ ಮೂವರು ಮಹಿಳೆಯರು ಹಾಗೂ ಓರ್ವ ಯುವಕನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ಐಸಿಯುನಲ್ಲಿದ್ದವರೂ ಸೇರಿ 45 ಬಿಡುಗಡೆ: ಜೂನ್ 21ರಂದು ಆಸ್ಪತ್ರೆಗೆ ದಾಖಲಾಗಿದ್ದು ಅಧಿಕ ರಕ್ತದೊತ್ತಡ, ಮೇದೋಜೀರಕ ಗ್ರಂಥಿಯ ಉರಿಯೂತ ಸಮಸ್ಯೆಯೊಂದಿಗೆ ಕರೊನಾ ಪಾಸಿಟಿವ್ ಆಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 56ರ ಗಂಡಸು ಸೇರಿದಂತೆ ಒಟ್ಟು 45 ಮಂದಿ ಗುಣವಾದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಪ್ರಸ್ತುತ ಡಯಾಬಿಟಿಸ್, ನ್ಯುಮೋನಿಯಾ ಹೊಂದಿರುವ ಕರೊನಾ ರೋಗಿಯೊಬ್ಬರನ್ನು ಐಸಿಯುಗೆ ದಾಖಲಿಸಿ ಹೈಫ್ಲೋ ನಾಸಲ್ ಕ್ಯಾನುಲಾ ಮೂಲಕ ಆಮ್ಲಜನಕ ನೀಡಲಾಗುತ್ತಿದೆ. 57 ವರ್ಷದ ಮಹಿಳೆ ಲಿವರ್ ಕಾಯಿಲೆ, ಡಯಾಬಿಟಿಸ್, ಹೃದಯರೋಗ, ನ್ಯುಮೋನಿಯಾದಿಂದ ಬಳಲುತ್ತಿದ್ದು ಐಸಿಯುನಲ್ಲಿ ವೆಂಟಿಲೇಟರ್ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ಒಟ್ಟು 557 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು 381 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 465ಕ್ಕೆ ಏರಿಕೆಯಾಗಿದ್ದು ಸಕ್ರಿಯ ಪ್ರಕರಣ 155 ಆಗಿದೆ. ಇದುವರೆಗೆ ಬಿಡುಗಡೆಯಾದವರ ಸಂಖ್ಯೆ 301.
ಕಾಸರಗೋಡಿನ 6 ಮಂದಿಗೆ ದೃಢ
ಕಾಸರಗೋಡು: ಜಿಲ್ಲೆಯ ಆರು ಮಂದಿ ಸಹಿತ ಕೇರಳದಲ್ಲಿ 152 ಮಂದಿಯಲ್ಲಿ ಬುಧವಾರ ಕೋವಿಡ್-19 ಕಾಣಿಸಿಕೊಂಡಿದೆ. ಕೋವಿಡ್ ರೋಗಬಾಧೆ ಕಾಣಿಸಿಕೊಂಡ ಅಂದಿನಿಂದ ರಾಜ್ಯದಲ್ಲಿ ಒಂದೇ ದಿನದಲ್ಲಿ ಕಾಣಿಸಿಕೊಂಡಿರುವ ಗರಿಷ್ಠ ಸಂಖ್ಯೆ ಇದಾಗಿದೆ.