

ಮುಂಡರಗಿ: ಜಮೀನು ಇರೋದು 12 ಎಕರೆ, ಆದಾಯ ಮಾತ್ರ ಸಿಕ್ಕಾಪಟ್ಟೆ. ಬಹುವಿಧದ ಬೆಳೆ ಬೆಳೆಯುವ ಮೂಲಕ ತಾಲೂಕಿನ ಬೀಡನಾಳ ಗ್ರಾಮದ ರೈತನೊಬ್ಬ ವಾರ್ಷಿಕವಾಗಿ ಲಕ್ಷಾಂತರ ರೂ. ಲಾಭ ಪಡೆಯುತ್ತಿದ್ದಾರೆ. ಜತೆಗೆ ಭೂಮಿಯ ಫಲವತ್ತತೆಗೂ ಆದ್ಯತೆ ನೀಡಿ ಮಾದರಿಯಾಗಿದ್ದಾರೆ.
ರೈತ ಶಂಕರಗೌಡ ಪಾಟೀಲ ಅವರು ತಮ್ಮ 12 ಎಕರೆ ಜಮೀನಿನಲ್ಲಿ 2 ಎಕರೆ ಬಾಳೆ, 4 ಎಕರೆ ಕಬ್ಬು, 4 ಎಕರೆ ಶೇಂಗಾ, 2 ಎಕರೆಯಲ್ಲಿ ಗೋಧಿ, ಮೆಣಸಿನಕಾಯಿ, ಹಾಗೂ ದನಗಳಿಗೆ ಮೇವು ಬೆಳೆದಿದ್ದಾರೆ. ಹಾಗೆಯೇ ಜಮೀನಿನ ಸುತ್ತ 70 ಸಾಗವಾನಿ, 13 ತೆಂಗು, 10 ಹೆಬ್ಬೇವು, 20 ಬೇವಿನ ಮರಗಳನ್ನು ಬೆಳೆಸಿದ್ದಾರೆ. ತೆಂಗಿನ ಮರಗಳು ಉತ್ತಮ ಫಲ ನೀಡುತ್ತಿವೆ.
ನರೇಗಾ ಯೋಜನೆಯಡಿ 2021ರಲ್ಲಿ 2.13 ಲಕ್ಷ ರೂ. ಸಹಾಯಧನದಲ್ಲಿ ಜಿ-9 ತಳಿಯ ಬಾಳೆ ಬೆಳೆದಿದ್ದಾರೆ. ಸದ್ಯ ಬಾಳೆ ಬೆಳೆಯ ಮೂರನೇ ಕಟಾವು ಮಾಡುತ್ತಿದ್ದಾರೆ. 16 ರೂ.ಕೆಜಿಯಂತೆ ಈಗಾಗಲೇ 14 ಟನ್ ಬಾಳೆ ಮಾರಾಟ ಮಾಡಿ 2.24 ಲಕ್ಷ ರೂ. ಪಡೆದಿದ್ದಾರೆ. ಇನ್ನೂ 12 ಟನ್ ಬಾಳೆ ಬರುವ ನಿರೀಕ್ಷೆ ಇದ್ದು, ಸದ್ಯ ವ್ಯಾಪಾರಸ್ಥರು 12 ರೂ.ಗೆ ಕೆಜಿಯಂತೆ ಕೇಳುತ್ತಿದ್ದಾರೆ. 1ನೇ ಕಟಾವಿಗೆ 50 ಟನ್, 2ನೇ ಕಟಾವಿಗೆ 40 ಟನ್ ಬಾಳೆಯನ್ನು ಮಾರಾಟ ಮಾಡಿ ಉತ್ತಮ ಆದಾಯ ಪಡೆದಿದ್ದಾರೆ. 4 ಎಕರೆಯಲ್ಲಿ ಕಬ್ಬು ಬೆಳೆದಿದ್ದು ಈಗಾಗಲೇ 2 ಬಾರಿ ಕಟಾವು ಮಾಡಿದ್ದಾರೆ. ನವೆಂಬರ್‌ನಲ್ಲಿ 2ನೇ ಕಟಾವು ಮಾಡಿದ್ದು ಪ್ರತಿಟನ್ ಕಬ್ಬಿಗೆ 2,400 ರೂ.ನಂತೆ 238 ಟನ್ ಕಬ್ಬನ್ನು ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆಗೆ ನೀಡಿ, 5.71 ಲಕ್ಷ ರೂ. ಆದಾಯ ಪಡೆದಿದ್ದಾರೆ. ಮೊದಲ ಕಟಾವಿಗೆ ಟನ್ ಕಬ್ಬಿಗೆ 2,300ನಂತೆ 248 ಟನ್ ನೀಡಿದ್ದರು. ಈಗ ಒಂದೂವರೆ ತಿಂಗಳ ಕಬ್ಬಿನ ಮೂರನೇ ಬೆಳೆ ಇದೆ. ಒಂದು ತಿಂಗಳಿಂದ 4 ಎಕರೆಯಲ್ಲಿ ಶೇಂಗಾ ಬೆಳೆಯುತ್ತಿದ್ದಾರೆ. ತಿಂಗಳ ಹಿಂದೆ ಶೇಂಗಾ ಹಾಕಿರುವ ಭಾಗದಲ್ಲಿ 2 ಎಕರೆಯಲ್ಲಿ ಬೀಜ, ಗೊಬ್ಬರ, ನಿರ್ವಹಣೆ ಸೇರಿ ಎಕರೆಗೆ 18 ಸಾವಿರ ರೂ.ಖರ್ಚು ಮಾಡಿ ಹಾಗಲ ಸೀಡ್ಸ್ ಬೆಳೆದಿದ್ದರು. ಕ್ವಿಂಟಾಲ್‌ಗೆ 32 ಸಾವಿರ ರೂ.ನಂತೆ 6 ಕ್ವಿಂಟಾಲ್ ಹಾಗಲ ಬೀಜ ಮಾರಾಟ ಮಾಡಿ 1.92 ಲಕ್ಷ ರೂ.ಆದಾಯ ಪಡೆದಿದ್ದಾರೆ. ಇನ್ನೆರಡು ಎಕರೆಯಲ್ಲಿ ಪ್ರತಿ ಎಕರೆಗೆ 15 ಸಾವಿರ ರೂ. ಖರ್ಚು ಮಾಡಿ ಗೋವಿನಜೋಳ ಬೆಳೆದು ಕ್ವಿಂಟಾಲ್‌ಗೆ 2,200ರೂ.ನಂತೆ 52 ಕ್ವಿಂಟಾಲ್ ಗೋವಿನಜೋಳ ಮಾರಾಟ ಮಾಡಿ 1.14 ಲಕ್ಷ ರೂ. ಲಾಭ ಪಡೆದಿದ್ದಾರೆ.
ಶಂಕರಗೌಡರು ಮನೆಯಲ್ಲಿ 2 ಎತ್ತು, 2 ಎಮ್ಮೆ ಹಾಗೂ 6 ಹಸುಗಳನ್ನು ಸಾಕಿದ್ದಾರೆ. ಎಮ್ಮೆಯ ಹಾಲನ್ನು ಮನೆಗೆ ಬಳಕೆ ಮಾಡಿಕೊಂಡು 6 ಹಸುಗಳ ಹಾಲನ್ನು ಲೀಟರ್‌ಗೆ 31 ರೂ.ನಂತೆ ನಿತ್ಯ 12 ಲೀ.ಹಾಲನ್ನು ಹಾಲಿನ ಕೇಂದ್ರಕ್ಕೆ ಹಾಕುತ್ತಾರೆ. ಹಾಲಿನಿಂದ ತಿಂಗಳಿಗೆ 11 ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ. ಹಸು, ಎಮ್ಮೆ, ಎತ್ತುಗಳ ಸೆಗಣೆಯನ್ನು ಜಮೀನಿಗೆ ಬಳಕೆ ಮಾಡುತ್ತಾರೆ. ಕಬ್ಬುಬೆಳೆಗೆ ಕಾರ್ಖಾನೆಯಿಂದ ಕೊಡುವ ರಾಸಾಯನಿಕ ಗೊಬ್ಬರ ಹಾಕಿ, ಇನ್ನುಳಿದ ಎಲ್ಲ ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಇವರ ಜಮೀನಿನ ಸಮೀಪದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಖ್ಯಕಾಲುವೆ ಹಾದು ಹೋಗಿದ್ದು, 1.90 ಲಕ್ಷ ರೂ.ಖರ್ಚು ಮಾಡಿ ಒಂದೂವರೆ ಕಿ.ಮೀ.ವರೆಗೆ 4 ಇಂಚಿನ ಪೈಪ್ ಹಾಕಿ ಜಮೀನಿಗೆ ನೀರು ತಂದು ಜಮೀನಿನ ಬಾವಿಗೆ ತುಂಬಿಸುತ್ತಾರೆ. ಅಲ್ಲಿಂದ ಬೆಳೆಗೆ ನೀರು ಹರಿಸುತ್ತಾರೆ. ಅಲ್ಲದೆ, ಜಮೀನಿನಲ್ಲಿ 3 ಬೋರ್‌ವೆಲ್ ಇದ್ದು ಬೇಸಿಗೆಯಲ್ಲಿ ಅದರಿಂದ ನೀರು ಹರಿಸುತ್ತಾರೆ. ಶಂಕರಗೌಡ ಅವರೊಂದಿಗೆ ಸಹೋದರ ಬಸವನಗೌಡ ಸೇರಿ ಕುಟುಂಬದವರು ಕೈಜೋಡಿಸುವುದರಿಂದ ನಿರ್ವಹಣೆಯ ಖರ್ಚು ಸಹ ಕಡಿಮೆಯಾಗುತ್ತಿದೆ.
ಒಲಿದ ಪ್ರಶಸ್ತಿ: ಶಂಕರಗೌಡ ಅವರ ಕೃಷಿ ಸಾಧನೆ ಗುರುತಿಸಿ ಕೃಷಿ ಇಲಾಖೆಯಿಂದ 2021- 22ನೇ ಸಾಲಿನ ಆತ್ಮ ಯೋಜನೆಯಡಿ 10 ಸಾವಿರ ರೂ.ಗೌರವಧನದೊಂದಿಗೆ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.