12.90 ಲಕ್ಷ ರೂ. ವೆಚ್ಚದಲ್ಲಿ ಪುಸ್ತಕ ವಿತರಣೆ

24 Jaggu 5-web
ಬೆಳಗಾವಿ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ಪುಸ್ತಕ ಬಿಡುಗಡೆ ಮಾಡಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಸಚಿವ ಎಂ.ಬಿ.ಪಾಟೀಲ, ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಯಯ್ಯ ಇತರರು ಇದ್ದರು.
Published on


ಬೆಳಗಾವಿ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸತೀಶ ಜಾರಕಿಹೊಳಿ ಫೌಂಡೇಷನ್‌ನಿಂದ 12.90 ಲಕ್ಷ ರೂ. ವೆಚ್ಚದಲ್ಲಿ 15 ಸಾವಿರ ಅಭ್ಯಾಸ ಪುಸ್ತಕಗಳನ್ನು ಶಾಲೆಗಳಿಗೆ ಉಚಿತವಾಗಿ ಹಂಚಿಕೆ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಾಂಕೇತಿಕ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ 915 ಪ್ರೌಢಶಾಲೆಗಳ 56,856 ವಿದ್ಯಾರ್ಥಿಗಳಿಗೆ ಪುಸ್ತಕ ನೀಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೂಡಲಗಿ ವಲಯವು 2ನೇ ಮತ್ತು 3ನೇ ಸ್ಥಾನ ಗಳಿಸುತ್ತಿದೆ. ಅದಕ್ಕೆ ಅಲ್ಲಿನ ಶಿಕ್ಷಕರ ಪರಿಶ್ರಮ ಕಾರಣ. ಆ ಶಿಕ್ಷಕರಿಂದಲೇ ಅಭ್ಯಾಸ ಪುಸ್ತಕಗಳನ್ನು ರೂಪಿಸಿದ್ದೇವೆ. ಬೆಳಗಾವಿಯು ಶೈಕ್ಷಣಿಕವಾಗಿ ಪ್ರಥಮ ಸ್ಥಾನದಲ್ಲಿರಬೇಕು ಎನ್ನುವುದು ನಮ್ಮ ಗುರಿ. ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಅಂಕ ಗಳಿಸಬೇಕು ಎಂದರು.

ರಾಜಕೀಯ ಜತೆ ನಮಗೆ ಸಮಾಜಸೇವೆಯೂ ಮುಖ್ಯ. ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಒತ್ತು ಕೊಟ್ಟಿದ್ದೇವೆ. ಯಮಕನಮರಡಿ ಕ್ಷೇತ್ರದ ಶಾಲೆಗಳಿಗೆ ಶಾಸಕರ ಅನುದಾನದಲ್ಲಿ 4 ಸಾವಿರ ಡೆಸ್ಕ್ ವಿತರಿಸಿದ್ದೇವೆ. 60 ವ್ಯಾಯಾಮ ಶಾಲೆ, ಸಿಸಿ ಕ್ಯಾಮರಾ, ಕಂಪ್ಯೂಟರ್, ವಿಜ್ಞಾನ ಕಲಿಕೆ ಸಾಮಗ್ರಿಗಳನ್ನೂ ನೀಡಿದ್ದೇನೆ. ಫೌಂಡೇಷನ್ ಅತಿಥಿ ಗೃಹದಲ್ಲಿ ಕರೊನಾ ವೇಳೆ 1,500 ಜನರನ್ನು ಆರೈಕೆ ಮಾಡಿದ್ದೇವೆ. ನನ್ನ ಮಕ್ಕಳಿಗೂ ಸಮಾಜಸೇವೆಯಲ್ಲಿ ತೊಡಗುವಂತೆ ತಿಳಿಸಿದ್ದೇನೆ. ಅವರೂ ಸಮಾಜಸೇವೆಯಲ್ಲಿ ನಿರತರಾಗಿದ್ದಾರೆ ಎಂದರು. ಮಾಜಿ ಸಂಸದ ಡಿ.ಎಂ.ಚಂದ್ರಪ್ಪ, ಮಾತನಾಡಿ ಬಡವರು, ಹಿಂದುಳಿದವರ ಪರ ಸತೀಶ ಅವರಿಗೆ ಇರುವ ಕಾಳಜಿಯು ನಮಗೂ ಮಾದರಿಯಾಗಿದೆ ಎಂದರು. ಮಾಜಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ವಿತರಿಸುತ್ತಿರುವುದು ಅರ್ಥಪೂರ್ಣ ಕಾರ್ಯಕ್ರಮ. ಸೇನೆ, ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಅವರು ತರಬೇತಿ ಕೊಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ನಾವೂ ಹಮ್ಮಿಕೊಳ್ಳುತ್ತೇವೆ ಎಂದರು.

ಶಾಸಕರಾದ ಗಣೇಶ ಹುಕ್ಕೇರಿ, ಲಕ್ಷ್ಮೀ ಹೆಬ್ಬಾಳ್ಕರ್, ಡಾ.ಅಂಜಲಿ ನಿಂಬಾಳ್ಕರ್, ಪ್ರಸಾದ ಅಬ್ಯಯ್ಯ, ಟಿ. ರಘುಮೂರ್ತಿ, ಮುಖಂಡರಾದ ಅಶೋಕ ಪಟ್ಟಣ, ಎಸ್.ಬಿ.ಘಾಟಗೆ, ರಮೇಶ ಕುಡಚಿ, ಕಾಕಾಸಾಹೇಬ ಪಾಟೀಲ, ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ವೀರಕುಮಾರ ಪಾಟೀಲ, ಮುಖಂಡರಾದ ರಾಹುಲ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ, ಗಜಾನನ ಮಂಗಸೂಳಿ, ಬಿ.ಸೋಮಶೇಖರ, ಅಶೋಕ ಪೂಜಾರಿ, ವಿಶ್ವಾಸ ವ್ಯೆದ್ಯ, ಬೆಳಗಾವಿ ಡಿಡಿಪಿಐ ಬಸವರಾಜ ನಾಲವತವಾಡ, ಚಿಕ್ಕೋಡಿ ಡಿಡಿಪಿಐ ಮೋಹನ ಹಂಚಾಟೆ ಇದ್ದರು. ಪಕ್ಷದ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net