

ಭದ್ರಾವತಿ: ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ 12.50 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಆಡಿಟ್ ವರದಿಯಲ್ಲಿ ‘ಎ’ ಶ್ರೇಣಿ ಕಾಯ್ದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಬಿ.ಜೆ.ಜಗದೀಶ್ ಗೌಡ ತಿಳಿಸಿದರು.
ಎಪಿಎಂಸಿ ಆವರಣದಲ್ಲಿರುವ ಸಂಘದ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘವು ಪ್ರಾರಂಭದಿಂದಲೂ ಸತತವಾಗಿ ಲಾಭ ಗಳಿಸುತ್ತಿದೆ. ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸದಸ್ಯರಿಗೆ ವಿವಿಧ ಸಾಲಸೌಲಭ್ಯ ನೀಡಲಾಗುತ್ತಿದೆ. ಸಂಘದ ಸದಸ್ಯರುಗಳಿಗೆ ಶೇ.8 ಡಿವಿಡೆಂಡ್ ಮತ್ತು ಅಡಕೆ ಮಾರಾಟದ ಮೇಲೆ 1 ಕ್ವಿಂಟಾಲ್‌ಗೆ 400 ರೂ. ಬೋನಸ್ ನೀಡಲಾಗುವುದು ಎಂದರು.
ಸಂಘದ ಸದಸ್ಯರೂ ಆದ ಶಾಸಕ ಬಿ.ಕೆ.ಸಂಗಮೇಶ್ವರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಘವು ಮತ್ತಷ್ಟು ಅಭಿವೃದ್ಧಿ ಕಾಣುವ ಸಲುವಾಗಿ ಸಂಘದ ಮತ್ತೊಂದು ಶಾಖೆ ತೆರೆಯಲು ಸಿಂಗನಮನೆ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ಮಂಜೂರು ಮಾಡಿಕೊಡಲಾಗುವುದು. ಅಲ್ಲದೆ ಇಲ್ಲಿನ ಶಾಖೆಯಲ್ಲಿ ಗೊಬ್ಬರ ಮಾರಾಟ ಮಾಡಲು ಅವಕಾಶ ನೀಡುವಂತೆ ಎಪಿಎಂಸಿ ಕಾರ್ಯದರ್ಶಿಗಳ ಜತೆ ಚರ್ಚಿಸಲಾಗುವುದು ಎಂದರು.
ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಎಚ್.ಟಿ.ಉಮೇಶ್, ನಿರ್ದೇಶಕರಾದ ಸಿ.ಮಲ್ಲೇಶಪ್ಪ, ಯು.ಗಂಗನಗೌಡ, ಎಚ್.ಆರ್.ತಿಮ್ಮಪ್ಪ, ಎಚ್.ಎಲ್.ಷಡಕ್ಷರಿ, ಸಿ.ಹನುಮಂತಪ್ಪ, ಮಹೇಶ್, ಜಿ.ಇ.ಲೋಕೇಶಪ್ಪ, ದಶರಥ ಗಿರಿ, ಎಂ.ಎಸ್.ಬಸವರಾಜ್, ಎಸ್.ಎಚ್.ಸಂಜೀವಕುಮಾರ್, ಎಸ್.ಮಹೇಶ್ವರಪ್ಪ, ಸುಲೋಚನಾ, ಲಲಿತಮ್ಮ, ಎಂ.ವಿರೂಪಾಕ್ಷಪ್ಪ ಇತರರಿದ್ದರು.